ದೇಶಭಕ್ತರ ಮನಸ್ಸಿಗೆ ಬೆಂಕಿ ಹಚ್ಚುತ್ತಾ ಕಾಂಗ್ರೆಸ್‌ ಭಾರತ್ ಜೋಡೋ ಯಾತ್ರೆ: ಬಿಜೆಪಿ ಮುಖಂಡ ಕಿಡಿ

ಹೊಸದಿಗಂತ ವರದಿ, ಮಂಡ್ಯ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಡ್ಡಿಗೆ ಕಾಂಗ್ರೆಸ್ ಬೆಂಕಿ ಹಚ್ಚುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ದೇಶ ಭಕ್ತರ ಮನಸ್ಸಿಗೆ ಬೆಂಕಿ ಹಚ್ಚುವ ಕೆಲಸ ಮಾಡಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಇದು ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಆರೋಪಿಸಿದರು.
ರಾಷ್ಟ್ರಹಿತ ಚಿಂತನೆಯೇ ಆರ್‌ಎಸ್‌ಎಸ್ ಮೂಲಾಧಾರ, ಅಕಾರಕ್ಕಿಂತ ಸೇವೆ, ಶಿಸ್ತು, ಸಮರ್ಪಣೆಗೇ ಪ್ರಾಧಾನ್ಯ, ಒಂದು ಸಶಕ್ತ ರಾಷ್ಟ್ರದ ನಿರ್ಮಾಣಕ್ಕೆ ಬೇರೆ ಅಸ್ತ್ರ, ಶಸ್ತ್ರಗಳ ಅವಶ್ಯಕತೆಯಿಲ್ಲ. ರಾಷ್ಟ್ರಪ್ರೇಮವೊಂದೇ ಅಸ್ತ್ರ ಎಂಬ ತತ್ವದಡಿ ಸ್ವಯಂಸೇವಕ ಸಂಘ ರಾಷ್ಟ್ರವನ್ನು ಜೋಡಿಸುವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ದೇಶವಾಸಿಗಳ ಮನಸ್ಸಿಗೇ ಬೆಂಕಿ ಇಡುವ ಕೆಲಸ ಮಾಡುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾಗಾಂ ಅವರು ಗೋವಾದ ವಿಧಾನ ಸಭಾ ಚುನಾವಣಾ ವೇಳೆ ಕರ್ನಾಟಕಕ್ಕೆ ಮಹದಾಯಿ ನದಿಯಿಂದ ಒಂದು ಹನಿ ನೀರೂ ಕೊಡಬೇಡಿ ಎಂದು ತಿಳಿಸಿದ್ದರು, ಒಕ್ಕೂಟ ವ್ಯವಸ್ಥೆಯಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿ ಓಟ್ ಬ್ಯಾಂಕ್ ವೃದ್ಧಿಸಿಕೊಳ್ಳಲು ಹೊರಟ ಇಂತಹ ನಾಯಕರ ಪಕ್ಷದಿಂದ ದೇಶವನ್ನು ಜೋಡಿಸುವ ಕೆಲಸವನ್ನು ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನ ಕರ್ತೃ ಡಾ ಬಿ.ಆರ್. ಅಂಬೇಡ್ಕರ್ ಅವರ ನಿಧನಾನಂತರ ಅವರ ಪಾರ್ಥೀವ ಶರೀರವನ್ನು ದೆಹಲಿಯ ರಾಜ್‌ಘಾಟ್‌ನಲ್ಲಿ ಅಂತ್ಯಸಂಸ್ಕಾರ ಮಾಡಲು ಬಿಡದ ಕಾಂಗ್ರೆಸ್ಸಿಗರಿಂದ ಭರತ ಭೂಮಿಯ ಎಲ್ಲ ಜಾತಿ ಜನಾಂಗ, ಧರ್ಮಗಳನ್ನು ಒಗ್ಗೂಡಿಸಲು ಸಾಧ್ಯವಾದೀತೇ, ಮೊದಲು ಇಂತಹ ಕೆಲಸವನ್ನು ಮಾಡುವ ಮೂಲಕ ಭಾರತ್ ಜೋಡಿಸಬೇಕು. ಆನಂತರ ಭಾರತ್ ಜೋಡೋ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಮರ್ಯಾದ ಪುರುಷ ಶ್ರೀರಾಮನ ಜನ್ಮಭೂಮಿಯಲ್ಲಿ ಬಿಜೆಪಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಮಾಡಿದರೆ, ಕಾಂಗ್ರೆಸ್ ತನ್ನ ಮತ ಬ್ಯಾಂಕ್ ವೃದ್ಧಿಗೆ ವಿದೇಶಿ ಆಕ್ರಮಣಕಾರ ಬಾಬರ್‌ನನ್ನು ಸಮರ್ಥನೆ ಮಾಡುವ ಮೂಲಕ ಸಾಕ್ಷಾತ್ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ ಸಮಗ್ರ ಹಿಂದೂಗಳ ಭಾವನೆಗೆ ಬೆಂಕಿ ಹಚ್ಚಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನಾದರೂ ಕಾಂಗ್ರೆಸ್ ಮನಸ್ಸು ಮನಸ್ಸುಗಳ ನಡುವೆ ಬೆಂಕಿ ಹಚ್ಚುವ ಕಾರ‌್ಯವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮತದಾರರೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!