ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಲಂಪೀ ಎನ್ನುವ ಮಾರಕ ಖಾಯಿಲೆಯೊಂದು ಭಾರತದ ಹಲವಾರು ರಾಜ್ಯಗಳನ್ನು ಬಾಧಿಸುತ್ತಿದೆ. ಮನುಷ್ಯರಿಗೆ ಬಂದ ಕೋವಿಡ್ ಸಾಂಕ್ರಾಮಿಕದಂತೆ ಈ ಖಾಯಿಲೆಯೂ ಕೂಡ ವ್ಯಾಪಕವಾಗಿ ರಾಜ್ಯದಿಂದ ರಾಜ್ಯಕ್ಕೆ ಹರಡುತ್ತಿದೆ. ಭಾರತದ ಹಲವಾರು ರಾಜ್ಯಗಳಲ್ಲಿ ಇದುವರೆಗೂ ಸುಮಾರು 57 ಸಾವಿರಕ್ಕೂ ಅಧಿಕ ಜಾನುವಾರುಗಳನ್ನು ಈ ಖಾಯಿಲೆ ಬಲಿ ತೆಗೆದುಕೊಂಡಿದೆ. ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳು ಈ ಖಾಯಿಲೆಯನ್ನು ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಸೇರಿಸುವಂತೆ ಒತ್ತಾಯಿಸುತ್ತಿವೆ.
ಹೀಗೆ ಜಾರ್ಖಂಡ್ ನಿಂದ ಗುಜರಾತ್ – ಮಹಾರಾಷ್ಟ್ರದ ವರೆಗೂ ವ್ಯಾಪಿಸಿರುವ ಈ ಮಾರಣಾಂತಿಕ ಖಾಯಿಲೆಯ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ಏನಿದು ಲಂಪೀ ಖಾಯಿಲೆ ?
ಲಂಪೀ ಖಾಯಿಲೆಯು ರೀತಿಯ ವೈರಲ್ ಖಾಯಿಲೆಯಾಗಿದ್ದು ಇದು ಕ್ಯಾಪ್ರಿಪಾಕ್ಸ್ವೈರಸ್ ಕುಲದ ಪಾಕ್ಸ್ವಿರಿಡೆ ಕುಟುಂಬಕ್ಕೆ ಸೇರಿದ ವೈರಸ್ ನಿಂದ ಬರುತ್ತದೆ. ಮುಖ್ಯವಾಗಿ ಜಾನುವಾರುಗಳು ಈ ಖಾಯಿಲೆಯ ಬಲಿಪಶುಗಳು. ಇದು ಸೊಳ್ಳೆಗಳು, ನೊಣಗಳು ಮತ್ತು ಕಣಜಗಳಂತಹ ರಕ್ತ ಹೀರುವ ಕೀಟಗಳ ನೇರ ಸಂಪರ್ಕದಿಂದ ಮತ್ತು ಕಲುಷಿತ ಆಹಾರ ಮತ್ತು ನೀರಿನ ಮೂಲಕವೂ ಹರಡುತ್ತದೆ. ಈ ರೋಗವು ಪಶುವಿನ ಇಡೀದೇಹದ ತುಂಬಾ ಚರ್ಮದಲ್ಲಿ ಗಂಟುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಉಲ್ಬಣಿಸಿ ಬಾಯಿ ಮತ್ತು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿ ಗಾಯಗಳುಂಟಾಗಿ ಬಂಜೆತನ, ಹಾಲಿನ ಉತ್ಪಾದನೆಯ ನಷ್ಟ ಅಥವಾ ಜಾನುವಾರಿನ ಸಾವಿಗೂ ಕಾರಣವಾಗಬಹುದು.
ಈ ರೋಗಕ್ಕೆ ಲಸಿಕೆ ಲಭ್ಯವಿದೆಯೇ ?
ಹೌದು ಈ ರೋಗದ ಚಿಕಿತ್ಸೆಗೆ ಲಸಿಕೆ ಲಭ್ಯವಿದೆ. ಇಲ್ಲಿಯವರೆಗೆ, ರೋಗವನ್ನು ಎದುರಿಸಲು ಶೀಪಾಕ್ಸ್ ವೈರಸ್ (SPV) ಮತ್ತು ಮೇಕೆ ಪೋಕ್ಸ್ ವೈರಸ್ (GPV) ಆಧಾರಿತ ಲಸಿಕೆಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ಭಾರತೀಯ ವಿಜ್ಞಾನಿಗಳು ಸ್ಥಳೀಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಎಕ್ವೈನ್ಸ್ ಹಾಗು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಲಂಪಿ ರೋಗದ ವಿರುದ್ಧ Lumpi-ProVacInd ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. Lumpi-ProVacInd
ಈ ವೈರಸ್ ಮನುಷ್ಯರಿಗೆ ಹರಡುತ್ತದಾ ?
ಸದ್ಯದ ಮಟ್ಟಿಗೆ ಇಲ್ಲವೆಂದೇ ಹೇಳಬಹುದು. ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿರುವ ಕುರಿತು ಯಾವುದೇ ಪುರಾವೆಗಳು ಲಭ್ಯವಿಲ್ಲ.
ಭಾರತದಲ್ಲಿ ಲಂಪೀ ಖಾಯಿಲೆ
ಇದು ಮೊದಲು ಕಾಣಿಸಿಕೊಂಡಿದ್ದು ಗುಜರಾತಿನ ಕಚ್ ಪ್ರದೇಶದಲ್ಲಿ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ರೋಗ ಮೊದಲು ಕಾಣಿಸಿಕೊಂಡಿದ್ದು ನಂತರದಲ್ಲಿ ವ್ಯಾಪಕವಾಗಿ ಏಕಾಏಕಿ ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಭಾರತದಾದ್ಯಂತ ಹರಡಿತು. ದೇಶದಾದ್ಯಂತ ಈವರೆಗೆ ಸುಮಾರು 57 ಸಾವಿರಕ್ಕೂ ಅಧಿಕ ಜಾನುವಾರುಗಳು ಈ ಖಾಯಿಲೆಗೆ ಬಲಿಯಾಗಿವೆ ಎಂದು ವರದಿಗಳಾಗಿವೆ.
ಈ ಕುರಿತು ಹಲವಾರು ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು ಪಶು ಸಂಗೋಪನಾ ಇಲಾಖೆಯ ವತಿಯಿಂದ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.