ಬಿಜೆಪಿ ವಿಶೇಷ ಕಾರ್ಯಕಾರಿಣಿ: ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗಲಿದೆ – ಯಡಿಯೂರಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವಿಶ್ವಮಾನ್ಯ ಪ್ರಧಾನಿ ನರೇಂದ್ರ ಮೋದಿಜಿ ಅವರ ಕೊಡುಗೆ ಅಪಾರವಾದುದು. ಬೊಮ್ಮಾಯಿ ಸರಕಾರವು ರೈತರು, ಮಹಿಳೆಯರು, ಜನಸಾಮಾನ್ಯರು ಸೇರಿ ಎಲ್ಲರಿಗಾಗಿ ಕೆಲಸ ಮಾಡಿದೆ. ಇದನ್ನು ಜನರಿಗೆ ತಲುಪಿಸಿ ನಾವು ಮುಂದಿನ ಚುನಾವಣೆಯಲ್ಲಿ 150 ಸೀಟ್ ಗೆಲ್ಲುತ್ತೇವೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಮೋದಿಜಿ, ಕಾಮನ್ ಮ್ಯಾನ್ ಬಸವರಾಜ ಬೊಮ್ಮಾಯಿ ಸೇರಿ ನಾಯಕಗಣವೇ ನಮ್ಮಲ್ಲಿದೆ. ಇವೆಲ್ಲವೂ ನಮ್ಮ ಗೆಲುವಿಗೆ ಪೂರಕವಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಯಾರು ರಾಹುಲ್ ಗಾಂಧಿಯೇ? ವಿಶ್ವವೇ ಮೆಚ್ಚಿದ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿಜಿ, ಅಮಿತ್ ಶಾ ಜಿ ಅವರು ನಮ್ಮ ಜೊತೆ ಇರುವಾಗ ಬರುವಂಥ ಎಲ್ಲ ಚುನಾವಣೆಗಳಲ್ಲಿ ಕರ್ನಾಟಕ ಸೇರಿ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ ಎಂದು ನುಡಿದರು.

ಕರ್ನಾಟಕದ ಯಾವುದಾದರೂ ಮನೆಗೆ ಹೋಗಿ ಸರಕಾರದ ಸವಲತ್ತು ಸಿಗದ ಒಂದು ಮನೆ ಇದ್ದರೆ ತಿಳಿಸಿ ಎಂದು ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚಿಸಿದ ಅವರು, ಸರ್ವರಿಗೂ ಸಮಬಾಳು, ಸಮಪಾಲು ಚಿಂತನೆಯಡಿ ಅನೇಕ ಸವಲತ್ತುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಟ್ಟಿವೆ. ಕರ್ನಾಟಕದ ಬಜೆಟ್ ಸಂದರ್ಭದಲ್ಲೂ ನಿರೀಕ್ಷೆಗೆ ಮೀರಿ ಸವಲತ್ತುಗಳನ್ನು ಕೊಡಲಿದ್ದೇವೆ ಎಂದು ಎಂದರು.

ಪ್ರಪಂಚದ ಎಲ್ಲ ದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಭಾರತವು ವಿಶ್ವವೇ ಮೆಚ್ಚುವ ರೀತಿಯಲ್ಲಿ ದಾಪುಗಾಲು ಹಾಕುತ್ತಿದೆ. ಯಾವುದೇ ಶಕ್ತಿ ಕೂಡ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ಅಸಾಧ್ಯ ಎಂದು ವಿಶ್ವಾಸದಿಂದ ನುಡಿದರು. ಈ ಆತ್ಮವಿಶ್ವಾಸ ನಮ್ಮದಾಗಿರಲಿ ಎಂದು ಹುರಿದುಂಬಿಸಿದರು.

ಪರಿಶಿಷ್ಟ ಜಾತಿ ವರ್ಗದವರ ಸಮಸ್ಯೆ ಪರಿಹರಿಸಬೇಕು. ಎಲ್ಲ ವರ್ಗದವರ ವಿಶ್ವಾಸ ಪಡೆದುಕೊಳ್ಳಿ. ಇದು 130 ರಿಂದ 140 ಸ್ಥಾನ ಗೆಲ್ಲಲು ಸಹಾಯಕ ಎಂದು ಕಿವಿಮಾತು ಹೇಳಿದರು. ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಮೊದಲ ರಾಜ್ಯ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನೂ ಕೂಡ ನೀಡಲಾಗುತ್ತಿದೆ. ಬಡ ಹೆಣ್ಣುಮಗುವಿಗೆ ಭಾಗ್ಯಲಕ್ಷ್ಮಿ ಯೋಜನೆಯಡಿ ಸುಮಾರು 25 ಲಕ್ಷ ಜನರು ಸವಲತ್ತು ಪಡೆದಿದ್ದಾರೆ ಎಂದು ವಿವರಿಸಿದರು.

22 ಕೋಟಿಗೂ ಹೆಚ್ಚು ಮನೆಗೆ ಗಂಗೆ ಯೋಜನೆಯಡಿ ನಲ್ಲಿ ನೀರಿನ ಸಂಪರ್ಕ ಕೊಡಲಾಗಿದೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗುತ್ತಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ 75 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುತ್ತಿದ್ದೇವೆ. ವಿಕಾಸಸೌಧದ ಬಳಿ ಡಾ.ಅಂಬೇಡ್ಕರ್‌ ಅವರ ಸ್ಫೂರ್ತಿ ಭವನ ನಿರ್ಮಿಸಲಾಗುತ್ತಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ನೇಕಾರ ಸಮುದಾಯಕ್ಕೆ ದೊಡ್ಡ ಕೊಡುಗೆ ಕೊಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳ, ಬಂಜಾರ ಸಮುದಾಯಕ್ಕೆ ಹಕ್ಕುಪತ್ರ, ಗ್ರಾಮ ಒನ್ ಯೋಜನೆ ಜಾರಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರದಿಂದ 5,300 ಕೋಟಿ ನೀಡಿದ್ದು, ಪ್ರಧಾನಿ ಮೋದಿಜಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಕೃಷಿಗೆ ಒತ್ತು, ಇಂಧನ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದು ದೂರದೃಷ್ಟಿಯ ಚಿಂತನೆ ಎಂದು ತಿಳಿಸಿದರು.

ಕಾಂಗ್ರೆಸ್ 2 ಬಸ್ ಯಾತ್ರೆ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿ ಅಸಮಾಧಾನ ತುಂಬಿ ತುಳುಕುತ್ತಿದೆ. ಈ ಕುರಿತು ಪರಮೇಶ್ವರ್ ಅವರು ಅಸಮಾಧಾನ ಸೂಚಿಸಿದ್ದಾರೆ, ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗಲಿದೆ ಎಂದು ಯಡಿಯೂರಪ್ಪ ನುಡಿದರು. ಕಾಂಗ್ರೆಸ್ ಕನಸು ಕಾಣುವ ಕಾಲ ಮುಗಿದಿದೆ ಎಂದು ವಿಶ್ವಾಸದಿಂದ ಹೇಳಿದರು.

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ, ನಾನು ಮತ್ತು ಅರುಣ್ ಸಿಂಗ್ 3 ತಂಡಗಳಲ್ಲಿ ಯಾತ್ರೆ ಮಾಡಲಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!