Thursday, March 23, 2023

Latest Posts

ಬಿಜೆಪಿ ಸರಕಾರದ ವಿರುದ್ಧ ಮಾರ್ಚ್ 9 ರಂದು ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್ : 

ಬಿಜೆಪಿಯ ಭ್ರಷ್ಟಾಚಾರ ವಿರೋಧಿಸಿ ಮಾರ್ಚ್ 9ರಂದು ಕರ್ನಾಟಕ ಬಂದ್ ಮಾಡಲಾಗುತ್ತಿದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರದ ದುರ್ವಾಸನೆ ವಾಕರಿಕೆ ತರಿಸಿದೆ. 40 % ಸರ್ಕಾರ ಎಲ್ಲ ವರ್ಗದ ಜನರ ಬದುಕು ನಾಶ ಮಾಡಿದೆ. ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ, ಭ್ರಷ್ಟಾಚಾರಕ್ಕೋಸ್ಕರದ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ಸಾಧನೆಗಳೆಂದರೆ, ಗುತ್ತಿಗೆಯಲ್ಲೂ 40% ಕಮಿಷನ್. ಶಾಲಾ ಅನುದಾನದಲ್ಲಿ 40% ಕಮಿಷನ್. ಧಾರ್ಮಿಕ ಮಠಗಳ ಅನುದಾನದಲ್ಲಿ 30% ಕಮಿಷನ್. ಮೈಸೂರು ಸ್ಯಾಂಡಲ್ ಸೋಪ್ ಅಕ್ರಮದಲ್ಲಿ ಲಂಚ. ವರ್ಗಾವಣೆ ಮತ್ತು ಪೋಸ್ಟಿಂಗ್ ಗೆ ಲಂಚ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರದ ಲೂಟಿ ವಿರೋಧಿಸಿ ಕಾಂಗ್ರೆಸ್ ಪಕ್ಷ ಮಾರ್ಚ್ 9 ರಂದು ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದೆ ಎಂದು ಹೇಳಿದ್ದಾರೆ.

ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲು ಬೆಳಗ್ಗೆ 9 ಗಂಟೆಯಿಂದ ಬೆಳಗ್ಗೆ 11 ಗಂಟೆವರೆಗೂ ಸಾಂಕೇತಿಕ ಬಂದ್ ಮಾಡಲಾಗುವುದು. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ, ಸಾರಿಗೆ ಹಾಗೂ ಇತರ ಅಗತ್ಯ ಸೇವೆಗಳನ್ನು ಬಂದ್ ವ್ಯಾಪ್ತಿಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ.

ಕಾಂಗ್ರೆಸ್ ಪಕ್ಷ ರಾಜ್ಯದ ಪ್ರತಿ ನಗರದಲ್ಲಿ ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕನ್ನಡಿಗರು ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಟ್ಟಿದ್ದಾರೆ. ನಮ್ಮ ಬೇಡಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!