ಹೊಸದಿಗಂತ ವರದಿ,ಮಡಿಕೇರಿ:
ಮಡಿಕೇರಿ: ಕಾಂಗ್ರೆಸ್ ಪಕ್ಷ ‘ ಗ್ಯಾರಂಟಿ ಕಾರ್ಡ್’ ಅಭಿಯಾನದ ಮೂಲಕ ಜನರನ್ನು ವಂಚಿಸುತ್ತಿದೆಯೆಂದು ಟೀಕಿಸಿದ ಶಾಸಕ ಕೆ.ಜಿ. ಬೋಪಯ್ಯ, ಯಾವುದೇ ಗ್ಯಾರಂಟಿ ಇಲ್ಲದ ಗ್ಯಾರಂಟಿ ಕಾರ್ಡ್ ಇದೆಂದು ಲೇವಡಿ ಮಾಡಿದರು.
ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಮಡಿಕೇರಿ ಗ್ರಾಮಾಂತರ ಮತ್ತು ನಗರ ಮಂಡಲ ‘ಕಾರ್ಯಕರ್ತರ ಮಿಲನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನಿಡುವುದಾಗಿ ಹೇಳುವ ಗ್ಯಾರಂಟಿ ಕಾರ್ಡ್ ಪಡೆಯುವ ನಾಗರಿಕರು ಅದನ್ನು ಪಡೆಯುವುದಾದರೂ ಎಲ್ಲಿಂದ ಎಂದು ಪ್ರಶ್ನಿಸಿದ ಅವರು, ಗ್ಯಾರಂಟಿ ಕಾರ್ಡನ್ನು ಉಪ್ಪು ಹಾಕಿ ನೆಕ್ಕಬೇಕಷ್ಟೆ ಎಂದು ಕುಟುಕಿದರು.
ನಿಮ್ಮ ಅಸ್ತಿತ್ವವೇ ಇಲ್ಲದೆ ಜನರಿಗೇನು ಗ್ಯಾರಂಟಿ ಕೊಡುತ್ತೀರಾ ಎಂದು ಕಾಂಗ್ರಸ್ನ್ನು ಪ್ರಶ್ನಿಸಿದ ಬೋಪಯ್ಯ, ಬಿಜೆಪಿ ಏನು ತನ್ನ ಪ್ರಣಾಳಿಕೆಯನ್ನು ಹೇಳುತ್ತದೋ ಅದನ್ನು ಕಾರ್ಯಗತಗೊಳಿಸಿ ತೋರಿಸುತ್ತದೆಯೆಂದು ಸ್ಪಷ್ಟಪಡಿಸಿದರು