Friday, March 24, 2023

Latest Posts

ಜಾತಿ ರಾಜಕೀಯವನ್ನು ಮೆಟ್ಟಿ ನಿಲ್ಲುವುದನ್ನು ಸವಾಲಾಗಿ ಸ್ವೀಕರಿಸಿ: ಬಿಜೆಪಿ ಕಾರ್ಯಕರ್ತರಿಗೆ ಗಣ್ಯರ ಕರೆ

ಹೊಸದಿಗಂತ ವರದಿ,ಮಡಿಕೇರಿ:

ಭಾರತೀಯ ಜನತಾ ಪಾರ್ಟಿಯ ವಿರುದ್ಧವಾದ ಕಾಂಗ್ರೆಸ್‍ನ ಅಪಪ್ರಚಾರಗಳನ್ನು ಮೆಟ್ಟಿ ನಿಲ್ಲುವುದರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವ ಮೂಲಕ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಂತೆ ಮಾಡಲು ಪಕ್ಷದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕೆಂದು ಪಕ್ಷದ ಗಣ್ಯರು ಕರೆ ನಿಡಿದರು.

ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಮಡಿಕೇರಿ ಗ್ರಾಮಾಂತರ ಮತ್ತು ನಗರ ಮಂಡಲ ‘ಕಾರ್ಯಕರ್ತರ ಮಿಲನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಪೂರ್ಣ ಬಹುಮತದ ಬಿಜೆಪಿ ಸರ್ಕಾರದ ರಚನೆಯಾಗಲೇಬೇಕೆನ್ನುವ ದೃಷ್ಟಿಯಿಂದ ಮುಂದಿನ ದಿನಗಳು ನಮಗೆ ಸವಾಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.

ಜಾತಿ ರಾಜಕೀಯದಿಂದ ಜಿಲ್ಲೆಗೆ ಭವಿಷ್ಯವಿಲ್ಲ: ಜಾತಿ ರಾಜಕಾರಣದಿಂದ ಜಿಲ್ಲೆಗೆ ಭವಿಷ್ಯವಿಲ್ಲವೆಂದು ಸ್ಪಷ್ಟಪಡಿಸಿದ ಕೆ.ಜಿ. ಬೋಪಯ್ಯ, ನಾವು ಹುಟ್ಟಿದ ಜಾತಿಯ ಬಗ್ಗೆ ಅಭಿಮಾನವಿರಲಿ, ದುರಭಿಮಾನ ಬೇಡ. ಹೀಗಿದ್ದೂ ಜಾತಿಯನ್ನು ಮುಂದು ಮಾಡಿ ನಡೆಸುವ ರಾಜಕೀಯವನ್ನು ಮೆಟ್ಟಿ ನಿಲ್ಲುವುದನ್ನು ಸವಾಲಾಗಿ ಸ್ವೀಕರಿಸಿ ಎಂದು ಕರೆ ನೀಡಿದ ಅವರು, ಬಿಜೆಪಿ ಪಕ್ಷ ಅಭಿವೃದ್ಧಿಯೊಂದಿಗೆ ದೇಶದ ಅಖಂಡತೆಯ ಬಗ್ಗೆ ಚಿಂತನೆಗಳನ್ನು ಹರಿಸುವ ಪಕ್ಷವಾಗಿದ್ದು, ಇಂತಹ ಚಿಂತನೆಗಳಿಲ್ಲದಿದ್ದಲ್ಲಿ ದೇಶ ದೇಶವಾಗಿ ಉಳಿಯಲಾರದೆಂದು ಹೇಳಿದರು.
ನಿಮ್ಮ ಚರಿತ್ರೆ ಏನು?: ಕರ್ನಾಟಕವನ್ನು ಬಿಜೆಪಿ ಮಾರಾಟ ಮಾಡುತ್ತದೆನ್ನುವ ಕಾಂಗ್ರೆಸ್ ಟೀಕೆಗೆ ಇದೇ ಸಂದರ್ಭ ತಿರುಗೇಟು ನೀಡಿದ ಕೆ.ಜಿ. ಬೋಪಯ್ಯ, ಪಾಕಿಸ್ತಾನಕ್ಕೆ ಪಿಒಕೆಯನ್ನು ಬಿಟ್ಟು ಕೊಟ್ಟದ್ದು ಯಾರು, ಇಂಡೋ ಚೀನಾ ಭಾಯಿ ಭಾಯಿ ಎನ್ನುತ್ತಲೇ ನಡೆದ ಯುದ್ಧದಲ್ಲಿ ಟಿಬೆಟ್ ಪ್ರಾಂತ್ಯವನ್ನು ಬಿಟ್ಟು ಕೊಟ್ಟದ್ದು ಯಾರೆಂದು ಪ್ರಶ್ನಿಸಿದರಲ್ಲದೆ, ಬಿಜೆಪಿಯ ವಿರುದ್ಧ ಅನಗತ್ಯ ಅಪಪ್ರಚಾರದಲ್ಲಿ ತೊಡಗಿದಲ್ಲಿ ಕಾಂಗ್ರೆಸ್ ವಂಶಸ್ಥರ ನಡೆಗಳನ್ನು ಪ್ರಶ್ನಿಸಬೇಕಾಗುತ್ತದೆಂದು ಖಾರವಾಗಿ ನುಡಿದರು.
ಯಾರು ಬೇಕೆಂದು ನಿರ್ಧರಿಸಿ: ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ವಿಧ್ವಂಸಕ ಕೃತ್ಯವೆಸಗಿದವರನ್ನು ಸಮರ್ಥಿಸುವ ಕೆಲಸ ಮಾಡಿರುವ ಸಿದ್ದರಾಮಯ್ಯ ಮತ್ತು ಸ್ವಾಭಿಮಾನಿ ಸ್ವಾವಲಂಬಿ ಬದುಕನ್ನು ಜನಸಾಮಾನ್ಯರಿಗೆ ಒದಗಿಸುವ ಬಿಜೆಪಿ ನಡುವಿನ ಹೋರಾಟವೇ ಆಗಿದೆ. ಇದರಲ್ಲಿ ಯಾರು ಬೇಕೆನ್ನುವುದನ್ನು ನಿರ್ಧರಿಸಿ ಎಂದು ಹೇಳಿದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತವನ್ನು ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಪ್ರವೃತ್ತವಾಗಿದೆ. ಇಂದು ರಾಜ್ಯದಲ್ಲಿರುವ ಸರ್ಕಾರ ಒಂದು ಲೆಕ್ಕದಲ್ಲಿ ಸಮ್ಮಿಶ್ರ ಸರ್ಕಾರವೇ ಆಗಿದೆಯೆಂದು ಹಾಸ್ಯದ ದಾಟಿಯಲ್ಲಿ ನುಡಿದ‌ ಅವರು, ಪೂರ್ಣ ಬಹುಮತವಿಲ್ಲದ ಬಿಜೆಪಿಗೆ ಇತರೆ ಪಕ್ಷಗಳಿಂದ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಬಂದವರನ್ನು ಸೇರಿಸಿಕೊಂಡು ಸರ್ಕಾರ ರಚಿಸಲಾಗಿದೆಯೆಂದು ತಿಳಿಸಿದರಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾಜದ ಎಲ್ಲಾ ವರ್ಗಗಳಿಗೆ ನಿಡಿದ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ನೇರವಾಗಿ ನೆರವು ತಲುಪುವಂತಹ ವ್ಯವಸ್ಥೆಗಳು ಆಗಿವೆ. ಭಾಗ್ಯ ಲಕ್ಷ್ಮಿ, ಸಂಧ್ಯಾ ಸುರಕ್ಷಾ ಮೊದಲಾದ ಜನಪರವಾದ ಕಾರ್ಯಕ್ರಮಗಳಿಂದ ಸಮಾಜದ ಎಲ್ಲಾ ವರ್ಗದ ಜನತೆ ಗೌರವದ ಬದುಕನ್ನು ನಡೆಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆಯೆಂದು ವಿಶ್ವಾಸದಿಂದ ನುಡಿದ ಅಪ್ಪಚ್ಚು ರಂಜನ್, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಒಂದು ವರ್ಗಕ್ಕೆ ಸೀಮಿತವಾಗಿ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದರೆ, ಯಡಿಯೂರಪ್ಪ ಅವಧಿಯಲ್ಲಿ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ತಂದು ಎಲ್ಲಾ ವರ್ಗಕ್ಕೂ ಅದನ್ನು ತಲುಪುವಂತೆ ಮಾಡಿದರೆಂದು ತಿಳಿಸಿದರು.
ಜಿಲ್ಲೆಗೆ 4 ಸಾವಿರ ಕೋಟಿ: ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಒಟ್ಟಾಗಿ ವಿಶೇಷ ಅನುದಾನಗಳು ಸೇರಿದಂತೆ 4 ಸಾವಿರ ಕೋಟಿ ಅನುದಾನಗಳು ದೊರತಿದೆಯೆಂದು ಹೇಳಿದರು.
ಟೂರಿಸ್ಟ್ ಅಭ್ಯರ್ಥಿ ಬೇಕೆ?: ವೀರಾಜಪೇಟೆ ಕ್ಷೇತ್ರಕ್ಕೆ ‘ಟೂರಿಸ್ಟ್ ಕ್ಯಾಂಡಿಟೇಟ್’ ಬರುತ್ತಿದ್ದಾರೆಂದು ಕಾಂಗ್ರೆಸ್‍ನ್ನು ಲೇವಡಿ ಮಾಡಿದ ಅಪ್ಪಚ್ಚು ರಂಜನ್, ವಾರಕ್ಕೊಮ್ಮೆ ಜಿಲ್ಲೆಗೆ ಬರುವ, ಜನಸಾಮಾನ್ಯರ ಸಂಪರ್ಕಕ್ಕೆ ದೊರಕದ ಇಂತಹವರು ನಮಗೆ ಬೇಕೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಮಾ. 18ರಂದು ಫಲಾನುಭವಿಗಳ ಸಮಾವೇಶ: ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಮಾರ್ಚ್ 18 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಫಲಾನುಭವಿಗಳ ಸಮಾವೇಶ ಹಾಗೂ ನಾಪೋಕ್ಲುವಿನಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಮಾರ್ಚ್ 5 ರಿಂದ 20 ರವರೆಗೆ ಜಿಲ್ಲೆಯ ವಿವಿಧ ಕಡೆ ವಿವಿಧ ಮೋರ್ಚಾಗಳ ಸಮಾವೇಶ ನಡೆಯಲಿದೆ. ಮಾರ್ಚ್ 10 ಮತ್ತು 11 ರಂದು ಬಿಜೆಪಿಯ ರಥಯಾತ್ರೆಯೂ ಕೊಡಗಿನಲ್ಲಿ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಮಡಿಕೇರಿ ಕ್ಷೇತ್ರದ ಉಸ್ತುವಾರಿ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ರವಿ ಕಾಳಪ್ಪ, ಪಕ್ಷದ ಪ್ರಮುಖರಾದ ಶಾಂತೆಯಂಡ ರವಿ ಕುಶಾಲಪ್ಪ, ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ತಳೂರು ಕಿಶೋರ್ ಕುಮಾರ್, ಮನು ಮಂಜುನಾಥ್, ಉಮೇಶ್ ಸುಬ್ರಮಣಿ, ಜಿ.ಪಂ ಮಾಜಿ ಅಧ್ಯಕ್ಷ ಹರೀಶ್ ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!