ಚುನಾವಣೆಗೆ ಮುನ್ನ ಕಾಂಗ್ರೆಸ್‌ ಗೆ ತಲೆನೋವು ತಂದಿತ್ತ ರಾಜಸ್ಥಾನ ನಾಯಕತ್ವ ಬಿಕ್ಕಟ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಒಂದು ಕಾಲದಲ್ಲಿ ದೇಶಾದ್ಯಂತ ವ್ಯಾಪಿಸಿಕೊಂಡಿದ್ದ ಕಾಂಗ್ರೆಸ್‌ ಈಗ ಬೆರಳೆಣಿಕೆ ರಾಜ್ಯಗಳಿಗಳಿಗಷ್ಟೇ ಸೀಮಿತವಾಗಿದೆ. ದೇಶದಲ್ಲಿ ನಡೆದ ಚುನಾವಣೆಗಳಲ್ಲೆಲ್ಲಾ ಸತತವಾಗಿ ಸೋತಿದ್ದ ಕಾಂಗ್ರೆಸ್‌ ಗೆ ರಾಜಸ್ತಾನದ ಗೆಲುವು ಪ್ರಾಣವಾಯುವಿನಂತೆ ಭಾಸವಾಗಿತ್ತು. ಈಗ ರಾಜಸ್ತಾನ ಮತ್ತೊಮ್ಮೆ ಚುನಾವಣೆಗೆ ಸಜ್ಜಾಗುತ್ತಿದೆ. ಮುಂದಿನ ವರ್ಷ ಅಲ್ಲಿನ ವಿಧಾನಸಭೆಗೆ ಚುಣಾವಣೆ ನಡೆಯಲಿದೆ. ಈ ನಡುವೆ ರಾಜ್ಯದ ನಾಯಕತ್ವ ಬಿಕ್ಕಟ್ಟು ಕಾಂಗ್ರೆಸ್ ಗೆ ಅತಿದೊಡ್ಡ ತಲೆನೋವಾಗಿ ಕಾಡುತ್ತಿದೆ. ಮುಂದಿನ ವರ್ಷ ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲೂ ಗುದ್ದಾಡಬೇಕಿದ್ದು, ರಾಜಸ್ತಾನದಲ್ಲಿ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿರುವ ಸಂಘರ್ಷ ಪಕ್ಷಕ್ಕೆ ಮುಳುವಾಗುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ.
ರಾಜಸ್ತಾನದ ಮುಖ್ಯಮಂತ್ರಿ ಗಾದಿಯಲ್ಲಿರುವ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್‌ ನಡುವಿನ ಕಂದಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೈಲೆಟ್‌ ಕಾಂಗ್ರೆಸ್‌ ನಾಯಕತ್ವ ಬದಲಾವನೆಗೆ ಬಲವಾಗಿ ಪಟ್ಟು ಹಿಡಿದಿದ್ದಾರೆ. ಇತ್ತ ಚುನಾವಣೆ ವರ್ಷ ನಾಯಕತ್ವ ಬದಲಿಸಿದರೆ ಪಕ್ಷಕ್ಕೆ ಬಲವಾದ ಹೊಡೆತ ಬೀಳಲಿದೆ. ಕಾಂಗ್ರೆಸ್ ಏನೇ ಕ್ರಮ ಕೈಗೊಂಡರೂ ಇಬ್ಬರಲ್ಲೊಬ್ಬರು ನಾಯಕರು ಮುನಿಸಿಕೊಳ್ಳುವುದು ಖಚಿತ. ಜೊತೆಗೆ ಚುನಾವಣೆ ಸಮೀಪದಲ್ಲಿರುವಾಗ ನಾಯಕತ್ವ ಬದಲಾವಣೆ ಮಾಡಿದರೆ ಅದು ಮತದಾನರರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ರಾಜಸ್ಥಾನದ ಸ್ಥಳೀಯ ಕಾಂಗ್ರೆಸ್ ನಾಯಕರು ಸಹ ಎಚ್ಚರಿಸಿದ್ದಾರೆ.
ಕಳೆದ ಬಾರಿ ಪಂಜಾಬ್‌ ಚುನಾವನೆಗೂ ಮುನ್ನ ತಪ್ಪು ಹೆಜ್ಜೆ ಇಟ್ಟಿದ್ದ ಕಾಂಗ್ರೆಸ್‌ ಬಲವಾದ ಪೆಟ್ಟು ತಿಂದಿತ್ತು.
ವಿಧಾನಸಭೆ ಚುನಾವಣೆಗೆ ಐದು ತಿಂಗಳ ಮೊದಲು, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರನ್ನು ತೆಗೆದುಹಾಕಲಾಗಿತ್ತು. ಆ ಬಳಿಕ ಕಾಂಗ್ರೆಸ್ ರಾಜ್ಯವನ್ನು ಉಳಿಸಿಕೊಳ್ಳಲು ವಿಫಲವಾಯಿತು. ನಂತರದ ಆಂತರಿಕ ಚರ್ಚೆಗಳಲ್ಲಿ, ಚುನಾವಣೆಗೆ ಹತ್ತಿರವಿರುವಾಗ ಸಿಎಂ ಸ್ಥಾನ ಕಿತ್ತುಕೊಂಡಿದ್ದೇ ಸೋಲಿಗೆ ಕಾರಣ ಎಂದು ಹಲವಾರು ನಾಯಕರು ಒಪ್ಪಿಕೊಂಡರು.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಯುವ ನಾಯಕ ಸಚಿನ್ ಪೈಲಟ್ ಭಿನ್ನಮತದ ನಡುವೆ ಸಿಲುಕಿ ಕಾಂಗ್ರೆಸ್‌ ಒದ್ದಾಡುತ್ತಿದೆ. ಅಶೋಕ್ ಗೆಹ್ಲೋಟ್ ಅವರಿಗೆ ಪಕ್ಷದ ಶಾಸಕರಲ್ಲಿ ವ್ಯಾಪಕ ಬೆಂಬಲವಿದೆ. ಈ ಹಿಂದೆ ಸೆ 25ರಂದು ಪಕ್ಷವು ಗೆಹ್ಲೋಟ್ ಅವರನ್ನು ಬದಲಿಸಿ, ಪೈಲಟ್ ಅವರನ್ನು ಮುಖ್ಯಮಂತ್ರಿಯಾಗಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಶಾಸಕರ ವಿರೋಧದಿಂದ ಇದು ಕಾರ್ಯರೂಪಕ್ಕೆ ಬರಲಿಲ್ಲ. ಕಾಂಗ್ರೆಸ್ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಯು ನಡೆಯದ ಕಾರಣ ಹೈಕಮಾಂಡ್ ಇರಿಸುಮುರಿಸು ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಮೂರು ದಿನಗಳ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದ ಸಚಿನ್ ಪೈಲಟ್ ಹಲವು ವಿಚಾರಗಳನ್ನು ಚರ್ಚಿಸಿದ್ದರು. ಆದರೆ ಪಕ್ಷದ ಶಾಸಕರ ಗೆಹ್ಲೋಟ್ ಪರವಾಗಿ ಬಲವಾಗಿ ನಿಂತಿರುವುದರಿಂದ ನಾಯಕತ್ವ ಬದಲಾವಣೆಯ ಯಾವುದೇ ಪ್ರಯತ್ನವು ಅಪಾಯಕಾರಿ ಎಂದು ವಿಶ್ಲೇಷಿಸಲಾಗಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಡಿಸೆಂಬರ್ ಮೊದಲ ವಾರದಲ್ಲಿ ರಾಜಸ್ಥಾನ ಪ್ರವೇಶಿಸಲಿದೆ. ಅಷ್ಟರ ಒಳಗೆ ಪಕ್ಷದ ಉನ್ನತ ನಾಯಕತ್ವವು ತನ್ನ ನಿಲುವು ಸ್ಪಷ್ಟಪಡಿಸಬಹುದು. ಮುಖ್ಯ ಬದಲಾವಣೆ ಬಗ್ಗೆ ಹೈಕಮಾಂಡ್​ನಿಂದ ಸಂದೇಶ ಬರಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ. ಭಾರತ್ ಜೋಡೋ ಯಾತ್ರೆಯು ಯಶಸ್ವಿಯಾಗಲು ರಾಜ್ಯ ಘಟಕದಿಂದ ಹಲವು ಹಂತಗಳಲ್ಲಿ ಸಾಕಷ್ಟು ಬೆಂಬಲ ಬೇಕಾಗುತ್ತದೆ. ಯಾತ್ರೆಯು ರಾಜಸ್ಥಾನ್ ಪ್ರವೇಶಿಸುವ ಮೊದಲು ನಾಯಕತ್ವ ಬದಲಾವಣೆಗೆ ಮುಂದಾಗುವುದು ಅಪಾಯಕಾರಿ ಎಂದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸಲು ಪೈಲಟ್‌ಗೆ ಸಾಕಷ್ಟು ಸಮಯ ಬೇಕಿರುವುದರಿಂದ ಈ ವರ್ಷದ ಆರಂಭದಲ್ಲೇ ಯಾವುದೇ ಬದಲಾವಣೆಯನ್ನು ಮಾಡಬಹುದಿತ್ತು ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಿದ್ದಾರೆ. ಕಾಂಗ್ರೆಸ್‌ ರಾಜ್ಯದ ಇಬ್ಬರು ಪ್ರಭಾವಿ ನಾಯಕರ ನಡುವಿನ ಭಿನ್ನಮತವನ್ನು ಎಷ್ಟು ಚಾಣಕ್ಷ್ಯ ತನದಿಂದ ಬಗೆಹರಿಸುತ್ತದೆ ಎಂಬುದರ ಆಧಾರದ ಮೇಲೆಯೇ ಮುಂದಿನ ವಿಧಾನ ಸಭೆಯಲ್ಲಿ ಪಕ್ಷದ ಭವಿಷ್ಯ ನಿರ್ಧರಿತವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!