ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಒದಗಿಸುವಂತೆ ಕಾಂಗ್ರೆಸ್‌ ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ: 

ಕಳೆದ 7 ತಿಂಗಳಿನಿಂದ ಜಿಲ್ಲೆಯ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ವಿತರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಟ್ಟಗುಡ್ಡ ಪ್ರದೇಶವಾಗಿರುವ ಕೊಡಗಿಗೆ ತಕ್ಷಣ ಸೀಮೆಎಣ್ಣೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಜನಸಂಖ್ಯೆ ಇದ್ದು, ಕೂಲಿ ಕಾರ್ಮಿಕರು ಹಾಗೂ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ಬಡಜನರಿಗೆ ಅಕ್ಕಿ, ಬೇಳೆ, ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ ಮತ್ತು ಪ್ರತಿ ತಿಂಗಳು 5 ಲೀಟರ್ ಸೀಮೆಣ್ಣೆ ವಿತರಿಸಲಾಗುತ್ತಿತ್ತು. ಇದರಿಂದ ಜನರು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ಈ ಹಿಂದಿನ ಪಡಿತರ ಯೋಜನೆಗಳನ್ನು ಕೈಬಿಡುವ ಮೂಲಕ ಬಡವರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ನಿರಂತರ ವಿದ್ಯುತ್ ಕಡಿತದ ಸಮಸ್ಯೆಯನ್ನು ಗ್ರಾಮೀಣ ಭಾಗದ ಜನ ಎದುರಿಸುತ್ತಿದ್ದು, ದೀಪ ಉರಿಸಲು ಕೂಡಾ ಸೀಮೆಎಣ್ಣೆ ಇಲ್ಲದಾಗಿದೆ. ಮಳೆಗಾಲ ಕೂಡಾ ಆರಂಭಗೊಂಡಿದ್ದು, ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಸೀಮೆಎಣ್ಣೆ ಕೊರತೆ ಮತ್ತು ವಿದ್ಯುತ್ ಕಡಿತ ಪರಿಣಾಮ ಬೀರಲಿದೆ. ಕೊಡಗನ್ನು ಬೆಟ್ಟಗುಡ್ಡ ಪ್ರದೇಶವೆಂದು ವಿಶೇಷವಾಗಿ ಪರಿಗಣಿಸಿ ಅತ್ಯಗತ್ಯವಾಗಿ ಬೇಕಾಗಿರುವ ಆಹಾರ ಪದಾರ್ಥ ಹಾಗೂ ಪ್ರತಿ ತಿಂಗಳು 5 ಲೀಟರ್ ಸೀಮೆಎಣ್ಣೆ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಶಾಸಕರುಗಳು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಕೊಡಗನ ತೀರ್ಥಕುಮಾರ್, ಪ್ರಧಾನ ಕಾರ್ಯದರ್ಶಿ ಬೊಳದಂಡ ಈ. ನಾಚಪ್ಪ ಹಾಗೂ ಪಕ್ಷದ ಪ್ರಮುಖ ನಾಪಂಡ ಗಣೇಶ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!