ಸಾಧುಸಂತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಿದ್ದರಾಮಯ್ಯರನ್ನು ಕಾಂಗ್ರೆಸ್‌ನಿಂದ ವಜಾ ಮಾಡಿ: ಈಶ್ವರಪ್ಪ ಆಗ್ರಹ

ಹೊಸದಿಗಂತ ವರದಿ ಶಿವಮೊಗ್ಗ
ಈ ದೇಶದ ಸಂಸ್ಕೃತಿ ಉಳಿಸುತ್ತಿರುವ ಸಾಧುಸಂತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸ್ ವರಿಷ್ಠರು ಪಕ್ಷದಿಂದ ವಜಾ ಮಾಡುವಂತೆ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳ ಉಡುಪಿಗೂ ಹಿಜಾಬ್‌ಗೂ ಹೋಲಿಕೆ ಮಾಡುತ್ತಿರುವ ಸಿದ್ದರಾಮಯ್ಯ ಮನಸ್ಥಿತಿ ಸಂಪೂರ್ಣ ಹಿಂದೂ ವಿರೋಧಿಯಾಗಿದೆ. ಇದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕೆ ಎಂದರು.
ಕೇವಲ ಬಾಯಿ ಮಾತಿನಲ್ಲಿ ಮಾತ್ರ ಸಾಮರಸ್ಯದ ಮಾತನಾಡುತ್ತಿರುವ ಸಿದ್ದರಾಮಯ್ಯ ನಡವಳಿಕೆಯಲ್ಲಿ ಸಂಪೂರ್ಣ ಹಿಂದೂ ವಿರೋಧಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಬೇಕು. ಇಲ್ಲದಿದ್ದರೆ ಸ್ವಾಗತ ಮಾಡಿ ಪಕ್ಷ ಹಿಂದೂ ವಿರೋಧಿಎಂಬುದನ್ನು ಒಪ್ಪಿಕೊಳ್ಳಬೇಕು. ಸಿದ್ದರಾಮಯ್ಯನವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ವಜಾಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಶಿಫಾರಸ್ಸು ಮಾಡಲಿ ಎಂದು ಸವಾಲು ಹಾಕಿದರು.
ಶಾಲೆ, ಕಾಲೇಜುಗಳಿಗೆ ಸಮವಸ್ತ್ರ ಹಾಕಿಕೊಂಡು ಹೋಗಿ. ಹಿಜಾಬ್‌ನಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಇದನ್ನು ತಿಳಿಯದೆ ತಿಳಿಗೇಡಿಯಂತೆ ವರ್ತಿಸುತ್ತಿರುವ ಸಿದ್ದರಾಮಯ್ಯನವರಿಗೆ ಹಿಂದೂಗಳೇ ಬುದ್ದಿ ಕಲಿಸಲಿದ್ದಾರೆ. ತಲೆಯ ಮೇಲೆ ಸೆರಗು ಹಾಕಿಕೊಳ್ಳುವ ಹಿಂದೂ ಮಹಿಳೆಯರು, ಸ್ವಾಮೀಜಿಗಳು ಶಾಲೆ, ಕಾಲೇಜುಗಳಿಗೆ ಹೋಗುತ್ತಾರೆಯೇ ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರಿಗೆ ಸಂವಿಧಾನ ಹಾಗೂ ನ್ಯಾಯಾಲಯದ ಮೇಲೆ ಗೌರವ ಇಲ್ಲ. ಹೀಗಾಗಿಯೇ ಹಿಜಾಬ್ ಪರವಾಗಿ ಇರುವವರಿಗೆ ಬೆಂಬಲಿಸುತ್ತಿದ್ದಾರೆ. ನ್ಯಾಯಾಲಯದ ಆದೇಶ ಬಂದಾಗ ಅದನ್ನು ಸ್ವೀಕರಿಸದ ಕೆಲವು ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣ ಬೇಕಾದರೆ ಬಿಡ್ತುತೇವೆ. ಹಿಜಾಬ್ ಬಿಡುವುದಿಲ್ಲ ಎಂದು ಹಠ ಹಿಡಿದಿದ್ದರು. ಇಂತಹವರಿಗೆ ಬುದ್ದಿವಾದ ಹೇಳುವ ಕೆಲಸ ಕಾಂಗ್ರೆಸ್ ನಾಯಕರಿಂದ ಆಗಿಲ್ಲ. ನ್ಯಾಯಾಲಯದ ಆದೇಶ ಪಾಲನೆ ಮಾಡಿ ಎಂದಿದ್ದರೆ ಇಷ್ಟೆಲ್ಲಾ ರಾದ್ದಾಂತ ಆಗುತ್ತಿರಲಿಲ್ಲ ಎಂದರು.
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದರೂ ಅದನ್ನು ಖಂಡಿಸಲಿಲ್ಲ. ಕಾಲೇಜು ಆಡಳಿತ ಮಂಡಳಿ, ಸರ್ಕಾರದ ಆದೇಶ, ನ್ಯಾಯಾಲಯದ ತೀರ್ಪು ಯಾವುದನ್ನು ಒಪ್ಪಿಕೊಳ್ಳದವರಿಗೆ ಬುದ್ದಿ ಹೇಳದೆ ಎಲ್ಲವನ್ನು ಬಿಜೆಪಿ ತಲೆಗೆ ಕಟ್ಟಲು ಯತ್ನಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!