ಮುಸ್ಲಿಮರು ಮೂಲತಃ ಶಿವ ಭಕ್ತರು: ಕೇದಾರ ಪೀಠದ ಜಗದ್ಗುರು ಶಿವಾಚಾರ್ಯ ಶ್ರೀ

ಹೊಸದಿಗಂತ ವರದಿ, ದಾವಣಗೆರೆ
ಮುಸ್ಲೀಮರು ಸಹ ಮೂಲತಃ ಶಿವನ ಭಕ್ತರು. ಮುಸ್ಲಿಂ ಧರ್ಮೀಯರ ಪವಿತ್ರ ಕ್ಷೇತ್ರವಾದ ಮೆಕ್ಕಾ, ಮದೀನಾದಲ್ಲಿ ಕೆಳಗೆ ಶಿವಲಿಂಗವಿದೆ ಎಂದು ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಭಕ್ತರೊಬ್ಬರ ಮನೆಗೆ ಶುಕ್ರವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದ ಬಗ್ಗೆ ಸಂವಿಧಾನಾತ್ಮಕವಾಗಿ ಅಧಿಕಾರ ನಡೆಸುವವರು ಹೇಳಿದರೆ ಸೂಕ್ತ. ಹಿಜಾಬ್ ಬಗ್ಗೆ ಉತ್ತರ ಕೊಡಬೇಕಾಗಿರುವುದು ಶಾಸನ ಮಾಡುವ ಸರ್ಕಾರವೇ ಹೊರತು ಧರ್ಮಗುರುಗಳಲ್ಲ ಎಂದರು.
ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವ ರೀತಿಯಲ್ಲೇ ಹಿಂದೂ ಮಹಿಳೆಯರು ತಲೆಯ ಮೇಲೆ
ಸೆರಗು ಹಾಕಿಕೊಳ್ಳುತ್ತಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಅದಕ್ಕೆಲ್ಲಾ ನಾನು ಪ್ರತಿಕ್ರಿಯಿಸುವುದಿಲ್ಲ. ಸಂವಿಧಾನ, ಕಾನೂನು ಬೇರೆ, ಧಾರ್ಮಿಕ ಪರಂಪರೆಗಳೇ ಬೇರೆ. ಪರಂಪರೆಯು ಶತ ಶತಮಾನಗಳಿಂದ ನಡೆದು ಬಂದಿದೆ. ಮಠಾಧೀಶರು, ಸ್ವಾಮೀಜಿಗಳು ಸಹ ತಲೆ ಮೇಲೆ ವಸ್ತ್ರ ಹಾಕುತ್ತಾರೆ. ಇದು ಸಂಪ್ರದಾಯ. ಧರ್ಮ ಗುರುಗಳು ಸರ್ವೇಜನಾಃ ಸುಖಿನೋ ಭವಂತು ಎನ್ನುವವರು ಎಂದು ಅವರು ನುಡಿದರು.
ರಾಜ್ಯದಲ್ಲಿ ಈಗ ಹಿಂದೂ ಧಾರ್ಮಿಕ ಸ್ಥಳಗಳ ಬಳಿ ಮುಸ್ಲಿಂ ಧರ್ಮೀಯರ ವ್ಯಾಪಾರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಅನೇಕ ಕಡೆ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶವೇ ಇಲ್ಲವೆಂಬುದಾಗಿ ನಿರ್ಣಯ ಕೈಗೊಂಡು, ಫಲಕಗಳನ್ನೂ ಹಾಕಿದ್ದಾರೆ. ಇಂತಹದ್ದಕ್ಕೆಲ್ಲಾ ರಾಜ್ಯವಾಳುವ ಪ್ರತಿನಿಧಿಗಳು ಸೂಕ್ತ ಉತ್ತರ ನೀಡಬೇಕು ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!