ಕಣ್ಣಿದ್ದೂ ಕುರುಡರಂತೆ ವರ್ತಿಸುವ ಕಾಂಗ್ರೆಸ್‌ ಗೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಕಾಣಿಸುವುದಿಲ್ಲ: ಸಿ.ಟಿ.ರವಿ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಕಾಂಗ್ರೆಸ್‌ನ ಪೂರ್ವಾಗ್ರಹ ಪೀಡಿತ ಮನಸುಗಳಿಗೆ ಸದಾ ನಮ್ಮನ್ನು ಟೀಕಿಸುವುದೇ ಹುಚ್ಚು, ಕಣ್ಣಿದ್ದೂ ಕುರುಡರಂತೆ ವರ್ತಿಸುವ ಅವರಿಗೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಕಾಣಿಸುವುದಿಲ್ಲ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಅವರು ಶನಿವಾರ ನಗರದ ಅಂಬೇಡ್ಕರ್ ಬೀದಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ವೃತ್ತದ ಕಾಮಗಾರಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರ ಸೇರಿದಂತೆ ಕ್ಷೇತ್ರದಲ್ಲಿ ನಮ್ಮ ಅವಧಿಯಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ ಎಂದು ಕಾಂಗ್ರೆಸಿಗರು ದೂರಿದ್ದಾರೆ. ಆದರೆ ಅದಕ್ಕೆ ಚುನಾವಣೆಯಲ್ಲಿ ಮತದಾರರು ಸೂಕ್ತ ಉತ್ತರ ಕೊಟ್ಟಿದ್ದಾರೆ. ಟೀಕೆ ಮಾಡುವವರಿಗೆ ಮೆಡಿಕಲ್ ಕಾಲೇಜು ನಿರ್ಮಾಣ ಅಭಿವೃದ್ಧಿ ಶೂನ್ಯ ಎಂದೆನಿಸಿದ್ದರೆ ಕಣ್ಣಿದ್ದು ಕುರುಡರು, ಕಿವಿ ಇದ್ದೂ ಕುರುಡರಾಗಿದ್ದಾರೆ ಎಂದರ್ಥ. ಹೀಗಿರುವವರಿಗೆ ನಮ್ಮ ಕೆಲಸ ಕಾಣಲು ಸಾಧ್ಯವಿಲ್ಲ ಎಂದರು.
ಕಡೂರು ಚಿಕ್ಕಮಗಳೂರು ಹೆದ್ದಾರಿ ಕಾಮಗಾರಿಯೂ ಅವರಿಗೆ ಕಾಣುವುದಿಲ್ಲ ಎಂದರೆ ಬಹುಷಃ ಅವರು ಜೀವಂತ ಶವವಾಗಿದ್ದಾರೆ ಎನ್ನಿಸುತ್ತದೆ. ಹಳ್ಳಿ ಹಳ್ಳಿಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡಿದ್ದು ಯಾರು? ಕಾಂಗ್ರೆಸ್‌ನವರು ನಾವು ಮಾಡಿದ್ದೆಂದು ಯಾವರುದಾದರೂ ಒಂದನ್ನು ಹೇಳಲಿ ಎಂದು ಸವಾಲು ಹಾಕಿದರು.
ಕರಗಡ ಕಾಲುವೆಯಲ್ಲಿ ನೀರು ಹರಿದು ನಾಲ್ಕು ಕೆರೆಗಳು ತುಂಬಿ ಬೆಳವಾಡಿ ಕೆರೆಗೆ ನೀರು ಬಂದಿದೆ. ಅದನ್ನು ಮಾಡಿದ್ದು ಯಾರು? ಕೇವಲ ೯ ತಿಂಗಳಲ್ಲಿ ಕರಗಡ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಭೈರಾಪುರ ಪಿಕ್ ಅಪ್ ಯೋಜನೆಯ ಕಾಮಗಾರಿಯನ್ನ ೧೦ ತಿಂಗಳ ಒಳಗಾಗಿ ಪೂರ್ಣಗೊಳಿಸುವ ಹಂತಕ್ಕೆ ತಂದಿದ್ದೇವೆ. ಜನವರಿ ಅಂತ್ಯಕ್ಕೆ ಸಂಪೂರ್ಣಗೊಳ್ಳಲಿದೆ. ಹಾಗಾದರೆ ಈ ಕೆಲಸಗಳನ್ನೆಲ್ಲಾ ಯಾರು ಮಾಡಿದ್ದು ಎಂದು ಪ್ರಶ್ನಿಸಿದರು.
ಪೂರ್ವಾಗ್ರಹ ಪೀಡಿತ ಮನಸುಗಳಿಗೆ, ತಮ್ಮ ೬ ವರ್ಷದ ಅವಧಿಯಲ್ಲಿ ಒಂದು ಪೈಸೆಯನ್ನೂ ಅಭಿವೃದ್ಧಿಗೆ ಕೊಡದವರಿಗೆ ಏನೂ ಕೇಳಿಸಲು ಸಾರ್ಧಯವಿಲ್ಲ. ಏನೂ ಕಾಣಿಸಲೂ ಸಾಧ್ಯವಿಲ್ಲ ಎಂದು ಟೀಕಿಸಿದರು.
ಸಂವೇದನಾಶೀಲತೆ ಇರುವವರಿಗೆ ಸೂಕ್ಷ್ಮತೆ ಅರ್ಥವಾಗುತ್ತದೆ. ಜನಕ್ಕೆ ನಾವು ಮಾಡಿದ ಕೆಲಸಗಳು ಕಾಣುತ್ತದೆ. ಅವರು ಆ ಕಾರಣಕ್ಕಾಗಿಯೇ ಮತ್ತೆ ಮೂರನೇ ಬಾರಿಗೆ ನಗರಸಭೆಯಲ್ಲಿ ಬಹುಮತದಿಂದ ಬಿಜೆಪಿಯನ್ನು ಆರಿಸಿದ್ದಾರೆ. ರಾಜ್ಯದ ಎಲ್ಲಾ ಕಡೆಗಳಿಗಿಂತಲೂ ಹೆಚ್ಚು ಮತಗಳನ್ನು ನೀಡಿದ್ದಾರೆ ಎಂದರು.
ಇದುವರೆಗಿನ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಅತೀ ಹೆಚ್ಚು ಮತಗಳನ್ನು ಪಡೆದಿದೆ. ಕಳೆದ ಬಾರಿ ೧೮ ಸಾವಿರ ಮತಗಳು ಬಂದಿದ್ದವು. ಈ ಬಾರಿ ೨೪ ಸಾವಿರ ಮತಳು ಬಂದಿವೆ. ೬ ಸಾವಿರದಷ್ಟು ಹೆಚ್ಚುವರಿ ಮತಗಳ ಜೊತೆಗೆ ಅಧಿಕಾರಕ್ಕೆ ಬೇಕಾದ ೧೮ ಸ್ಥಾನಗಳನ್ನೂ ಬಿಜೆಪಿ ಗೆದ್ದಿದೆ. ಹಾಗಾದರೆ ಇದು ಏನು ಸಂದೇಶ ಎಂದು ಪ್ರಶ್ನಿದ ಅವರು ಇಂದಿಗೂ ಜನ ಬಿಜೆಪಿ ಜೊತೆಗಿದ್ದಾರೆ. ಬಿಜೆಪಿ ಜನರ ಜೊತೆಗಿದೆ ಎನ್ನುವುದು ಇದರರ್ಥ ಎಂದರು.
ಅಭಿವೃದ್ಧಿ ಕೆಲಸ ಮಾಡದೇ ಇದ್ದರೆ ಜನ ಈ ಪ್ರಮಾಣದಲ್ಲಿ ಮತ ಕೊಡುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋದರೂ ರಿಪೇರಿ ಆಗದ ಮಾನಸಿಕ ಸ್ಥಿತಿಗೆ ಕೆಲವರು ಬಂದಿದ್ದಾರೆ. ನನ್ನ ಬಗ್ಗೆ ಟೀಕೆ ಮಾಡದೇ ಇದ್ದರೆ ಅವರಿಗೆ ತಿಂದ ಅನ್ನ ಅರಗುವುದಿಲ್ಲ. ಅದೊಂದು ರೀತಿ ಹುಚ್ಚು. ಅಂತಹ ಕೆಲವು ಶಾಶ್ವತ ಜನರಿದ್ದಾರೆ. ನಮಗೆ ಅಭಿವೃದ್ಧಿ ಕೆಲಸ ಮಾಡುವುದೇ ಬದ್ಧತೆ ಆದರೆ ಅವರಿಗೆ ನಮ್ಮನ್ನು ನಿಂದಿಸುತ್ತಾ ತಿರುಗುವುದೇ ಹುಚ್ಚು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!