ಕೇರಳದ ನೆಹರು ಟ್ರೋಫಿ ದೋಣಿ ಸ್ಪರ್ಧೆಗೆ ಅಮಿತ್ ಶಾಗೆ ಆಹ್ವಾನ: ಸಿಡಿಮಿಡಿಗೊಂಡ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ಆಯೋಜಿಸಲಾಗುವ ಅತ್ಯಂತ ವರ್ಣರಂಜಿತ ನೆಹರೂ ಕಪ್ ಬೋಟ್‌ ರೇಸ್‌ ಸ್ಪರ್ಧೆಯನ್ನು ವೀಕ್ಷಿಸಲು ಕೇರಳದ ಎಡ ಸರ್ಕಾರವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಿದ ಆಹ್ವಾನ ನೀಡಿದ ಕ್ರಮವನ್ನು ಪ್ರತಿಪಕ್ಷ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ಕೇಂದ್ರ ಗೃಹ ಸಚಿವರಿಗೆ ನೀಡಲಾದ ಆಹ್ವಾನವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ʼಕೋಮು ಶಕ್ತಿಗಳ ಮೇಲಿನ ನಿಷ್ಠೆ ಮತ್ತು ಬಿಜೆಪಿ ಮೇಲಿನ ಪ್ರೀತಿʼ ಅನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಟೀಕೆಗೆ ಪ್ರತಿಕ್ರಿಯಿಸಿರುವ ಕಮ್ಯೂನಿಷ್ಟ್ ಸರ್ಕಾರವು ‌ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಸೆಪ್ಟೆಂಬರ್ 4 ರಂದು ಅಲಪ್ಪುಳದ ಪುನ್ನಮಾಡ ಸರೋವರದಲ್ಲಿ ನಡೆಯುವ ಈ ಸ್ಪರ್ಧೆಯನ್ನು ವೀಕ್ಷಿಸಲು ಅಮಿತ್‌ ಶಾ ಅವರನ್ನು ಆಹ್ವಾನಿಸಲಾಗಿದೆ. ಶಾ ಅವರು ಅದಕ್ಕಿಂತ ಒಂದು ದಿನ ಮುಂಚಿತವಾಗಿ 30ನೇ ದಕ್ಷಿಣ ವಲಯ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ರಾಜ್ಯದ ಪ್ರಖ್ಯಾತ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ಸಲ್ಲಿಸಲಾಗಿದೆ ಎಂದಿದೆ.
ಸಿಪಿಐ(ಎಂ) ಕೇರಳ ಘಟಕವು ಸಂಘಪರಿವಾರದ ನಾಯಕರಿಗೆ ನೀಡುತ್ತಿರುವ ಅತಿಯಾದ ಪ್ರಾಮುಖ್ಯತೆಯು ಪಕ್ಷದ ಪಾಲಿಟ್‌ ಬ್ಯೂರೋದ ಆಶೀರ್ವಾದದೊಂದಿಗೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು  ಕೆಪಿಸಿಸಿ ಮುಖ್ಯಸ್ಥ ಕೆ ಸುಧಾಕರನ್ ಒತ್ತಾಯಿಸಿದ್ದಾರೆ.
ಜವಾಹರಲಾಲ್ ನೆಹರು ಅವರನ್ನು ಅತಿ ಹೆಚ್ಚು ಅವಮಾನಿಸಿದ ಮತ್ತು ನಿರ್ಲಕ್ಷಿಸಿದವರನ್ನು ನೆಹರೂ ಅವರ ಹೆಸರಿನಲ್ಲೇ ನಡೆಯುವ ಬೋಟ್ ರೇಸ್‌ಗೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮುಖ್ಯಮಂತ್ರಿಗಳ ನಿರ್ಧಾರವು ಆಕ್ಷೇಪಾರ್ಹ ಎಂದು ಸುಧಾಕರನ್ ಕಿಡಿಕಾರಿದ್ದಾರೆ.
ಸರ್ಕಾರವು ಶಾ ಅವರನ್ನು ಮಾತ್ರವಲ್ಲದೆ, ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಶಾ ಅವರನ್ನು ಆಹ್ವಾನಿಸಲು ಲಾವಲಿನ್ ಪ್ರಕರಣ ಕಾರಣವೋ ಅಥವಾ ಅವರ ವಿರುದ್ಧದ ಚಿನ್ನಾಭರಣ ಪ್ರಕರಣವೋ ಎಂಬುದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಬೇಕು. ಇದು ದೆಹಲಿಯಲ್ಲಿ ಸಿಪಿಎಂ ಮತ್ತು ಸಂಘ ಪರಿವಾರದ ನಾಯಕತ್ವದ ನಡುವೆ ಅಪವಿತ್ರ ಸಂಬಂಧವಿದೆ ಎಂಬ ಯುಡಿಎಫ್ ಆರೋಪವನ್ನು ಒತ್ತಿಹೇಳುತ್ತದೆ. ಈ ಅವಕಾಶವಾದಿ ನಿಲುವಿ ಕುರಿತು ಸಿಪಿಎಂ ಪ್ರತಿಕ್ರಿಯಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ವಿ ಡಿ ಸತೀಶನ್ ಆಗ್ರಹಿಸಿದ್ದಾರೆ.
1952 ರಲ್ಲಿ ನೆಹರು ಅವರು ಸ್ವಾತಂತ್ರ್ಯಾ ನಂತರ ಕೇರಳದ ಮೊದಲ ಪ್ರವಾಸದ ಸಂದರ್ಭದಲ್ಲಿ ಕುಟ್ಟನಾಡ್‌ಗೆ ಭೇಟಿ ನೀಡಿದ ನೆನಪಿಗಾಗಿ ದೋಣಿ ಸ್ಪರ್ಧೆಗೆ ಅವರ ಹೆಸರನ್ನೇ ಇಡಲಾಗಿದೆ.
ಕೊಟ್ಟಾಯಂನಿಂದ ಅಲಪ್ಪುಳಕ್ಕೆ ತೆರಳುತ್ತಿದ್ದಾಗ ದೋಣಿ ನೌಕಾಯಾನದ ಪ್ರಚಂಡ ಉತ್ಸಾಹದ ಕಾರ್ಯಕ್ರಮದಿಂದ ಪ್ರಭಾವಿತರಾದ ಜವಾಹರಲಾಲ್ ನೆಹರು ಅವರು ವಿಜೇತರಿಗೆ ನೀಡಲಾಗುವ ರೋಲಿಂಗ್ ಟ್ರೋಫಿಯನ್ನು ನೀಡಿದರು. ಈ ಟ್ರೋಫಿಯನ್ನು ನಂತರ ‘ನೆಹರು ಟ್ರೋಫಿ’ ಎಂದು ನಾಮಕರಣ ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!