ಕಾಂಗ್ರೆಸ್ ಸರಕಾರದಿಂದ ಮುಸ್ಲಿಮರಿಗೆ ಮೀಸಲಾತಿ ವಿಧೇಯಕ ಮಂಡನೆ: ಏನಿದರ ಲಾಭ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಿಧಾನಸಭೆಯಲ್ಲಿಂದು ತೀವ್ರ ವಿರೋಧದ ನಡುವೆಯೂ ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ರಷ್ಟು ಮೀಸಲಾತಿ ನೀಡುವ ಹಾಗೂ ಹಿಂದುಳಿದ ವರ್ಗಗಳಿಗೆ ಸರಕು ಮತ್ತು ಸೇವೆಗಳಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಮಂಡಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸಾರ್ವಜನಿಕ ಸರಕು ಹಾಗೂ ಸರ್ಕಾರಿ ಗುತ್ತಿಗೆಗಳಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಮಂಡಿಸಿದರು.

ಬಹುತೇಕ ಬಜೆಟ್‌ ಘೋಷಣೆಗಳು ಆಯವ್ಯಯದ ಅಂಗೀಕಾರದ ಬಳಿಕ ಮೂರ್ನಾಲ್ಕು ತಿಂಗಳಾದ ಮೇಲೆ ವಿಧೇಯಕಗಳಾಗುತ್ತವೆ. ಆದರೆ ಮುಖ್ಯಮಂತ್ರಿಯವರ ಪರವಾಗಿ ಇಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ-2025ಅನ್ನು ಮಂಡಿಸಿದರು. ಈವರೆಗೂ ಸರ್ಕಾರಿ ಗುತ್ತಿಗೆಯಲ್ಲಿ ಎಸ್‌‍ಸಿ ಹಾಗೂ ಎಸ್‌‍ಟಿಗಳಿಗೆ ಮಾತ್ರ ಮೀಸಲಾತಿ ಇದ್ದು, ಇದೀಗ ಪ್ರವರ್ಗ 2 ಬಿಗೆ ಬರುವ ಮುಸ್ಲಿಮರಿಗೂ ಅವಕಾಶ ಕಲ್ಪಿಸಲಾಗಿದೆ.

ಈ ವಿಧೇಯಕದಲ್ಲಿ ಏನಿದೆ?
ಈ ವಿಧೇಯಕದ ಪ್ರಕಾರ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಗ್ರಾಮಸ್ವರಾಜ್ಯ ಮತ್ತು ಪಂಚಾಯತ್‌ ರಾಜ್‌, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯಿತಿ, ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರಿ ನಿರ್ಮಾಣ ಕಾಮಗಾರಿಗಳ ಪೈಕಿ ಶೇ.4 ರಷ್ಟನ್ನು ಮೀರದಂತೆ ಹಿಂದುಳಿದವರ ಪ್ರವರ್ಗ 2 ಬಿ ಗೆ ಸೇರಿದ ವ್ಯಕ್ತಿಗಳಿಗೆ ಪಾಲ್ಗೊಳ್ಳಲು ಪ್ರೋತ್ಸಾಹಿಸುವ ಉದ್ದೇಶವನ್ನು ವಿಧೇಯಕ ಹೊಂದಿದೆ.

ಅಧಿಸೂಚನಾ ಇಲಾಖೆಗಳಲ್ಲಿ ನಿರ್ಮಾಣ ಕಾಮಗಾರಿಗಳ ಹೊರತಾಗಿ ಸರಕು ಮತ್ತು ಸೇವೆಗಳ ಸಂಗ್ರಹಣೆಯಲ್ಲಿ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳು ಹಾಗೂ ಹಿಂದುಳಿದ ವರ್ಗಗಳಲ್ಲಿ ಶೇ.1 ಕೋಟಿ ರೂ.ವರೆಗೂ ಸರಕು -ಸೇವೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿಗಳಿಗೆ ಶೇ.17.15 ರಷ್ಟು, ಪರಿಶಿಷ್ಟ ಪಂಗಡಗಳಿಗೆ ಶೇ.6.95 ರಷ್ಟು, ಪ್ರವರ್ಗ 2 ಎ ಗೆ ಶೇ.15 ರಷ್ಟು, ಪ್ರವರ್ಗ 2 ಬಿ ಗೆ ಶೇ.4 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.

ಸರ್ಕಾರಿ ನಿರ್ಮಾಣ ಕಾಮಗಾರಿಗಳಲ್ಲಿ 1 ಕೋಟಿ ರೂ.ಗಳ ಮೀಸಲಾತಿಯನ್ನು 2 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ಈವರೆಗೂ ಎಸ್‌‍ಸಿ/ಎಸ್‌‍ಟಿಗಳಿಗೆ ಮಾತ್ರ ಮೀಸಲಾತಿ ಇದ್ದು, ಇದೀಗ ಪ್ರವರ್ಗ 2 ಬಿಗೆ ಬರುವ ಮುಸ್ಲಿಮರಿಗೂ ಅವಕಾಶ ಕಲ್ಪಿಸಲಾಗಿದೆ. ನಿರ್ದಿಷ್ಟ ಸಮುದಾಯದ ವ್ಯಕ್ತಿಗಳಿಂದ ಟೆಂಡರ್‌ ಸ್ವೀಕರಿಸದಿದ್ದಲ್ಲಿ ಅಂತಹ ಸರಕು ಮತ್ತು ಸೇವೆಗಳ ಸಂಗ್ರಹಣೆಯ ಆಹ್ವಾನಗಳಿಗೆ ಪ್ರತಿಕ್ರಿಯಿಸಿದ ಇತರ ಟೆಂಡರ್‌ದಾರರಿಗೆ ಅವಕಾಶ ನೀಡಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!