ಹೊಸದಿಗಂತ ವರದಿ ಬೆಂಗಳೂರು:
ಮಾಹಿತಿ ಹಕ್ಕಿನಡಿ (ಆರ್‌ಟಿಐ) ವಿವರ ಪಡೆಯುವ ಕಾರ್ಯಕರ್ತರ ಪಟ್ಟಿ ಮಾಡಲು ರಾಜ್ಯದ ಎಲ್ಲ ಇಲಾಖೆಗಳಿಗೆ ರಾಜ್ಯ ಸರಕಾರವು ಸ್ಪಷ್ಟ ಸೂಚನೆ ನೀಡಿದೆ. ಇದು ಸಂಪೂರ್ಣವಾಗಿ ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ಅಧಿಕಾರ ದುರ್ಬಳಕೆಯ ಕ್ರಮ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಟಿಐ ಅಡಿಯಲ್ಲಿ ಮಾಹಿತಿ ಪಡೆಯುವ ಕಾರ್ಯಕರ್ತರ ಪಟ್ಟಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ತಾವು ಮಾಡುವ ಕರ್ಮಕಾಂಡ ರಕ್ಷಣೆಗಾಗಿ ಮತ್ತು ಆರ್‌ಟಿಐ ಕಾನೂನಿನ ಉದ್ದೇಶವನ್ನು ಸೋಲಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಟೀಕಿಸಿದರು.
ಮಾಹಿತಿ ಪಡೆಯುವ ಕಾರ್ಯಕರ್ತರನ್ನು ಬೆದರಿಸುವುದು, ಹೆಸರಿಸುವುದಲ್ಲದೆ ಅಧಿಕಾರದ ದುರ್ಬಳಕೆ ಮಾಡಿ ಕೇಸುಗಳನ್ನು ಹಾಕುತ್ತಿದ್ದಾರೆ. ಕಾರ್ಯಕರ್ತರ ಚಲನವಲನ ತಪಾಸಣೆ ಮಾಡಲು, ಬೆದರಿಸಲು ಸರಕಾರ ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ಬಾಯಿಮಾತಿನಲ್ಲಿ ಮಾತ್ರ ಪಾರದರ್ಶಕ ಸರಕಾರ ಎಂದು ದೂರಿದರು. ಹಿಂದೆ ಲೋಕಾಯುಕ್ತ ಮುಚ್ಚಿದ್ದರು. ಈಗ ಆರ್‌ಟಿಐ ಕಾನೂನು ನಿಷ್ಕ್ರಿಯ ಮಾಡಲು ಪ್ರಯತ್ನ ನಡೆದಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡುತ್ತಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಕಾನೂನು- ಸುವ್ಯವಸ್ಥೆ ಕುಸಿಯುತ್ತದೆ. ಜನರ ರಕ್ಷಣೆ ಮಾಡುವಲ್ಲಿ ಹಾಗೂ ಪೊಲೀಸರ ರಕ್ಷಣೆಯಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಶಿವಮೊಗ್ಗದಲ್ಲಿ ಐಪಿಎಸ್ ಅಧಿಕಾರಿಯ ಮೇಲೆ ಕಲ್ಲು ತೂರಾಟ ನಡೆದಿದೆ. ರಾಜ್ಯದ ಇತರ ಕಡೆಯೂ ಇಂತಹ ಘಟನೆಗಳು ನಡೆದಿವೆ ಎಂದು ವಿವರಿಸಿದರು.
ದೇವಸ್ಥಾನಗಳ ನಾಶ, ಹಿಂದೂಗಳಿಗೆ ಚಿತ್ರಹಿಂಸೆ ನೀಡಿದ ಔರಂಗಜೇಬನನ್ನು ಔರಂಗಜೇಬ್ ದಿ ಗ್ರೇಟ್ ಎಂದು ಚಿತ್ರಿಸಲಾಗಿದೆ. ಟಿಪ್ಪು ಸುಲ್ತಾನನು ಒಂದು ಕೋಮಿನ ವ್ಯಕ್ತಿಯನ್ನು ಕೊಲ್ಲುವುದರ ಚಿತ್ರಣ, ಇಡೀ ಭಾರತಕ್ಕೆ ಹಸಿರು ಬಣ್ಣ ಕೊಟ್ಟು, ಕತ್ತಿಗಳನ್ನು ತೂಗಿಸುವುದು ಏನು ಸಂದೇಶ ಕೊಡುತ್ತದೆ ಎಂದು ಪ್ರಶ್ನಿಸಿದರು.
ಬರೀ ರಾಜಕೀಯ ನಡೆಸುವ ಸರ್ಕಾರ
ಸರಕಾರವು ಏನೂ ನಡೆದಿಲ್ಲ ಎಂಬಂತೆ ಮಾತನಾಡುತ್ತದೆ. ಗೃಹಸಚಿವರು ಉಡುಪಿಯದು ಮಕ್ಕಳಾಟ ಎಂದಿದ್ದರು. ಈಗ ಶಿವಮೊಗ್ಗದ್ದು ಸಣ್ಣ ಘಟನೆ ಎನ್ನುತ್ತಾರೆ. ಡಿಸಿಎಂರವರು ಭಯೋತ್ಪಾದಕರು ತಮ್ಮ ಸೋದರರು ಎನ್ನುತ್ತಾರೆ. ಸಿಎಂರಿಂದ ಟಿಪ್ಪು ಜಯಂತಿ ನಡೆಯುತ್ತದೆ ಎಂದು ಆಕ್ಷೇಪಿಸಿದರು.
ಎದ್ದರೆ ಕೂತರೆ ರಾಜಕೀಯ ನಡೆದಿದೆ. ಕಾವೇರಿ ವಿಚಾರದಲ್ಲೂ ವಿಫಲವಾಗಿದ್ದಾರೆ. ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರಾಗಿ ನೋಡುತ್ತಿದ್ದಾರೆ. ದಸರಾ, ಹಂಪಿ ಉತ್ಸವಕ್ಕೆ ಹಣ ಇಲ್ಲ. ಆತ್ಮಹತ್ಯೆ ಮಾಡಿಕೊಂಡ, ಬೆಳೆ ನಷ್ಟದ ಸಂಬಂಧ ರೈತರ ಕುಟುಂಬಕ್ಕೆ ಹಣ ಕೊಡುತ್ತಿಲ್ಲ ಎಂದು ಟೀಕಿಸಿದರು. ಅಭಿವೃದ್ಧಿಗೆ ದುಡ್ಡಿಲ್ಲ, ಅಲ್ಪಸಂಖ್ಯಾತರಿಗೆ ವಿಶೇಷ ಹಣ ಕೊಡುವುದಾಗಿ ಹೇಳಿಕೊಂಡು ಬರುತ್ತಾರೆ ಎಂದು ಆರೋಪಿಸಿದರು.
ಸರಕಾರ ವಿಸರ್ಜಿಸಲು ಆಗ್ರಹ
ಮುಖ್ಯಮಂತ್ರಿಗಳು ತಮ್ಮ ಆಡಳಿತ ವಿಫಲತೆ ಕಾರಣಕ್ಕಾಗಿ ರಾಜೀನಾಮೆ ನೀಡಿ ಸರಕಾರವನ್ನು ವಿಸರ್ಜಿಸಬೇಕು. ಸಿಎಂ, ಡಿಸಿಎಂ, ಗೃಹ ಸಚಿವರು ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಪೊಲೀಸ್ ವರ್ಗಾವಣೆಯಲ್ಲೂ ವಿಫಲತೆ ಕಾಣುತ್ತಿದೆ ಎಂದು ದೂರಿದರು.