ಚೀನಾದಿಂದ ಫಂಡ್‌ ಪಡೆದು ದೇಶವಿರೋಧಿ ಸುದ್ದಿ ಪೋಸ್ಟ್: ನ್ಯೂಸ್‌ಕ್ಲಿಕ್‌ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸ್‌ ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದಿಂದ ಫಂಡ್‌ ಪಡೆದು ಚೀನಾ ನೀತಿಗಳಿಗೆ ಸಂಬಂದಪಟ್ಟ ಸುದ್ದಿ ಪೋಸ್ಟ್‌ ಮಾಡುತ್ತಿದ್ದ ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ನ ಟ್ವಿಟರ್‌ ಪೇಜ್‌ಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಅಮಾನತು ಮಾಡಿದೆ. ಜೊತೆಗೆ ದೆಹಲಿಯಲ್ಲಿ 35 ಪ್ರದೇಶಗಳಲ್ಲಿ ದಾಳಿ ಮಾಡಿದ್ದು, ಇದರಲ್ಲಿ ನ್ಯೂಸ್‌ಕ್ಲಿಕ್‌ನಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿ ಪತ್ರಕರ್ತರ ಮನೆಗಳು ಸೇರಿವೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದೆಹಲಿ ಪೊಲೀಸ್ ಸ್ಪೆಷಲ್‌ ಸೆಲ್‌, ನ್ಯೂಸ್‌ ಪೋರ್ಟಲ್ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿದೆ.

ಸಂಸ್ಥೆಯು ಚೀನಾದಿಂದ ಹಣವನ್ನು ಪಡೆದ ಆರೋಪದ ನಡುವೆ ದೆಹಲಿ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಆರ್ಥಿಕ ಅಪರಾಧ ವಿಭಾಗದ (ಇಒಡಬ್ಲ್ಯು) ಕೆಂಗಣ್ಣಿಗೆ ಗುರಿಯಾಗಿದೆ. ಅಕ್ರಮವಾಗಿ ಈ ವೆಬ್‌ಸೈಟ್‌ ಹಣ ಪಡೆದಿದ್ದು, ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ನ್ಯೂಸ್‌ಕ್ಲಿಕ್‌ ನಪತ್ರಕರ್ತರಲ್ಲಿ ಒಬ್ಬರಾದ ಅಭಿಸರ್ ಶರ್ಮಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು , ದೆಹಲಿ ಪೊಲೀಸರು ನನ್ನ ಮನೆಗೆ ಬಂದಿಳಿದರು. ನನ್ನ ಲ್ಯಾಪ್‌ಟಾಪ್ ಮತ್ತು ಫೋನ್ ಅನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಬರೆದಿದ್ದಾರೆ.

ಮಂಗಳವಾರ ಬೆಳಿಗ್ಗೆ, ದೆಹಲಿ ಪೊಲೀಸರು ತಮ್ಮ ವಿಶೇಷ ಸೆಲ್ ತಂಡಗಳನ್ನು ಸಂಸ್ಥೆಗೆ ಸಂಬಂಧಿಸಿದ ಹಲವಾರು ಪತ್ರಕರ್ತರ ನಿವಾಸಗಳಿಗೆ ಕಳುಹಿಸಿದ್ದಾರೆ. ಪತ್ರಕರ್ತರ ಬಳಿಯಿದ್ದ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಲವಾರು ಪತ್ರಕರ್ತರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ನ್ಯೂಸ್‌ ಪೋರ್ಟಲ್ ಮತ್ತು ಅದರ ಸಂಸ್ಥಾಪಕರು,ಸಂಪಾದಕರ ನಿವಾಸಗಳು ಮತ್ತು ಕಟ್ಟಡಗಳ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದು, ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ, ತನಿಖೆಯ ಆಧಾರದ ಮೇಲೆ ಕೆಲವು ಜನರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ವಾರ್ತಾ ಮತ್ತು ಮಾಹಿತಿ ಸಚಿವ ಅನುರಾಗ್ ಠಾಕೂರ್, ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆ ಮತ್ತು ಅವರು ನಿಯಮಗಳನ್ನು ಅನುಸರಿಸುವ ಮೂಲಕ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನಾನು ದಾಳಿಗಳನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ, ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತವೆ. ತನಿಖಾ ಸಂಸ್ಥೆಗಳು ನಿಮಗೆ ತಪ್ಪು ಮೂಲಗಳಿಂದ ಹಣ ಬಂದಿದ್ದರೆ ಅಥವಾ ಆಕ್ಷೇಪಾರ್ಹ ಏನಾದರೂ ನಡೆದಿದ್ದರೆ, ಕ್ರಮ ಕೈಗೊಳ್ಳಬಾರದು ಎಂದು ಎಲ್ಲೂ ಬರೆದಿಲ್ಲವಲ್ಲ ಎಂದು ಭುವನೇಶ್ವರದಲ್ಲಿ ದಾಳಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!