ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನು ಹಾಳು ಮಾಡಿದೆ. ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಕ್ರೋಶವನ್ನು ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡ ಮಾತನಾಡಿದ ಮೋದಿ (Modi in Karnataka) ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗುತ್ತಿದೆ. ಅಭಿವೃದ್ಧಿ ಗೌಣವಾಗಿದೆ. ಎಲ್ಲೆಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಬೆಂಗಳೂರು ಸಬರ್ಬನ್ ಪ್ರಾಜೆಕ್ಟ್ ಕೆಲಸ ಶುರುವಾಗಿದೆ. ಸ್ಯಾಟಲೈಟ್ ರಿಂಗ್ ರಸ್ತೆಯ ಲಾಭವೂ ಶೀಘ್ರದಲ್ಲಿ ಸಿಗಲಿದೆ. ಮೇಡ್ ಇನ್ ಇಂಡಿಯಾಕ್ಕೂ ಬೆಂಗಳೂರು ಕೊಡುಗೆ ಅಪಾರ. ಕರ್ನಾಟಕಕ್ಕೂ ಬುಲೆಟ್ ಟ್ರೈನ್ ಬರಲಿದೆ ಎಂದು ಭರವಸೆ ನೀಡಿದರು. ಬೆಂಗಳೂರು ಡಿಜಿಟಲ್ ಇಂಡಿಯಾದ ಹಬ್. ಡಿಜಿಟಲ್ ವೇದಿಕೆಯಲ್ಲಿ ಬೆಂಗಳೂರು ಪಾತ್ರ ದೊಡ್ಡದು. ಮೊಬೈಲ್ ಡೇಟಾ 2014 ರಲ್ಲಿ ಒಂದು ಜಿಬಿ ಗೆ 250 ರೂ. ಇತ್ತು, ಈಗ 10 ರೂ. ಮೊಬೈಲ್ ಬಿಲ್ ಈಗ 500 ರೂಗಿಂತ ಕಮ್ಮಿ ಬರ್ತಿದೆ, ಇದರಿಂದ ಐದಾರು ಸಾವಿರ ಉಳೀತಿದೆ ಎಂದರು.

ನಾವು ನಮ್ಮ ಕೆಲಸ ಹಾಗೂ ಟ್ರ್ಯಾಕ್‌ ರೆಕಾರ್ಡ್‌ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಮ್ಮ ಸರ್ಕಾರ ರೇರಾ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಇದರಿಂದ ಸಾಮಾನ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆದಿದ್ದೇವೆ. 2014ಕ್ಕಿಂತ ಮೊದಲು ನಿಮಗೆ 2.5 ಲಕ್ಷ ರೂಪಾಯಿ ಇದ್ದರೂ ನೀವು ತೆರಿಗೆ ಕಟ್ಟಬೇಕಿತ್ತು. ಆದರೆ, ಇಂದು ನೀವು 7 ಲಕ್ಷದ ವರೆಗೆ ಆದಾಯ ಹೊಂದಿದರೂ ಒಂದು ರೂಪಾಯಿ ಟ್ಯಾಕ್ಸ್‌ ಕಟ್ಟುತ್ತಿಲ್ಲ. ಇನ್ನು ಜಿಎಸ್‌ಟಿ ಜಾರಿಯಿಂದ ಪರೋಕ್ಷ ತೆರಿಗೆ ಕಟ್ಟುವುದು ತಪ್ಪಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಸರ್ಕಾರದಿಂದ ಮಾತ್ರ ಎಂದು ಪ್ರಧಾನಿ ಮೋದಿ ತಿಳಿಸಿದರು.

ಎಲ್‌ಇಡಿ ಬಲ್ಬ್‌ ಅಂದು 400 ರೂಪಾಯಿ ಇತ್ತು. ಆದರೆ, ಇಂದು ನಾವದನ್ನು 40 ರೂಪಾಯಿವರೆಗೆ ಇಳಿಸಿದ್ದೇವೆ. ಇಂದು ಈ ಬಲ್ಬ್‌ಗಳು ಅದೆಷ್ಟೋ ಮಧ್ಯಮ ವರ್ಗದ ಮನೆಯಲ್ಲಿ ಉರಿಯುತ್ತಿದೆ. ಅವರಿಗೆ ಪ್ರಕಾಶಮಾನವಾದ ಬೆಳಕಿನ ಜತೆಗೆ ವಿದ್ಯುತ್‌ ಬಿಲ್‌ನಲ್ಲಿಯೂ ಉಳಿತಾಯ ಆಗುತ್ತಿದೆ. 20 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷ ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹಿಂದೆ ದೇಶ ಆರ್ಥಿಕ ಸಂಕಷ್ಟದಲ್ಲಿತ್ತು. ಬ್ಯಾಂಕ್ ಗಳು ಮುಳುಗುವ ಭೀತಿ ಎದುರಿಸುತ್ತಿದ್ದವು. ಅದು ಆ ಕಾಲ, ಈಗ ಕಾಲ ಬದಲಾಗಿದೆ. ಅನ್ಯ ದೇಶಗಳು ಭಾರತದ ಗೆಳೆತನ ಮಾಡಲು ಹಾತಿರೆಯುತ್ತಿವೆ. ಬಂಡವಾಳ ಹೂಡಲು ಉತ್ಸುಕವಾಗಿವೆ. ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕ ದೇಶ. ಭಾರತ ಯಾರನ್ನೂ ಅನುಸರಿಸುತ್ತಿಲ್ಲ, ಭಾರತವನ್ನ ಬೇರೆಯವರು ಅನುಸರಿಸ್ತಿದ್ದಾರೆ. ದೇಶದಲ್ಲಿ ಇಷ್ಟೊಂದು ಬದಲಾವಣೆ ಆಗಿದ್ದು ಹೇಗೆ? ಯಾರಿಂದ?. ಈ ಬದಲಾವಣೆ ಜನರ ಒಂದು ಮತದಿಂದ ಬಂತು ಎಂದರು.

ಮಧ್ಯಮ ಮತ್ತು ಬಡತನ ರೇಖೆ ಕೆಳಗೆ ಇರುವವರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ನೀಡಿದ್ದೇವೆ. ಇದನ್ನು 70 ವರ್ಷ ಮೇಲ್ಪಟ್ಟವರಿಗೂ ವಿಸ್ತರಣೆ ಮಾಡಲು ಮುಂದಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಈ ಮೊದಲು ಕಾಂಗ್ರೆಸ್ ಮಾಫಿಯಾ ಮಾಡೋದರಲ್ಲಿ ಲೀನವಾಗಿತ್ತು. ಭ್ರಷ್ಟಾಚಾರ ಮಾಡುವುದರಲ್ಲಿ ತಲ್ಲೀನವಾಗಿದೆ. ಆದರೆ, ನಾವು 70 ಕಿ.ಮೀ. ವರೆಗೆ ನಮ್ಮ ಮೇಟ್ರೋ ಯೋಜನೆಗೆ ಚಾಲನೆ ನೀಡಿದ್ದೇವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ವಿದೇಶಗಳಲ್ಲೂ ಚರ್ಚೆ ಆಗುತ್ತಿದೆ. ಬುಲೆಟ್ ಟೈನ್ ಅನ್ನು ತಂದು ನಿಮ್ಮ ಸಮಯವನ್ನು ಉಳಿಸಿದ್ದೇವೆ. ಇದರಿಂದ ಬೆಂಗಳೂರಿಗೆ ಬಂದು ಕೆಲಸ ಮಾಡುವವರಿಗೆ ಅನುಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸರ್ಕಾರದ ಸಾಧನೆಗಳ ಮಾಹಿತಿ ನೀಡಿದರು.

ಮೆಟ್ರೋ, ಕೋಚ್‌, ರೈಲು ಬೋಗಿಗಳನ್ನು ರಫ್ತು ಮಾಡುತ್ತಿದ್ದೇವೆ. ಮೊದಲ ಹಂತದ ಮಿಸೈಲ್‌ ಅನ್ನು ಫಿಲಿಪ್ಪೀನ್ಸ್‌ಗೆ ಕಳಿಸಿದ್ದೇವೆ. ಅಮೆರಿಕದ ಬಳಿಕ ಬೋಯಿಂಗ್‌ ಕರ್ನಾಟಕದಲ್ಲಿ ನಿರ್ಮಾಣ ಆಗುತ್ತಿದೆ. ಕಾಂಗ್ರೆಸ್‌ ಡಿಜಿಟಲ್‌ ಇಂಡಿಯಾವನ್ನು ವಿರೋಧ ಮಾಡಿತ್ತು. ಕೊರೋನಾ ವ್ಯಾಕ್ಸಿನ್‌ ಬಗ್ಗೆ ವ್ಯಂಗ್ಯ ಮಾಡಿತ್ತು. ಇಂದು ನಿಮ್ಮ ಮೋದಿ ದೇಶದಲ್ಲಿ 6 G ತರಲು ಪ್ರಯತ್ನ ಮಾಡುತ್ತಿದ್ದರೆ, ಕಾಂಗ್ರೆಸ್‌ ಮೋದಿಯನ್ನು ಇಳಿಸುತ್ತೇನೆ ಎಂದು ಹೊರಟಿದೆ. ಇದಕ್ಕೆ ನೀವು ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ನಾನು ನನ್ನ ಭಾಷಣವನ್ನು ಕನ್ನಡದಲ್ಲಿ ಅನುವಾದಿಸಿ ಟ್ವಿಟರ್‌ನಲ್ಲಿ ಅಪ್ಲೋಡ್‌ ಮಾಡುತ್ತಿದ್ದೇನೆ. ಇದಕ್ಕೆ ಕಾರಣವಾಗಿದ್ದು, AI ತಂತ್ರಜ್ಞಾನವಾಗಿದೆ ಎಂದು ಮೋದಿ ತಿಳಿಸಿದರು. ನನ್ನ ಒಂದು ವೈಯಕ್ತಿಕ ಕೆಲಸವನ್ನು ಮಾಡಿಕೊಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲರ ಮನೆಗೆ ಹೋಗಿ ಮೋದಿ ನಿಮಗೆ ಪ್ರಣಾಮವನ್ನು ಸಲ್ಲಿಸಲು ಹೇಳಿದ್ದಾರೆ ಎಂಬುದನ್ನು ಹೇಳಿ ಎಂದು ಕೇಳಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!