ದಿಗಂತ ವರದಿ ವಿಜಯಪುರ:
ಏಳೆಂಟು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳಲಿದ್ದು, ನಮ್ಮದೇ ಸರ್ಕಾರ ಬರುತ್ತೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.
ವಿಧಾನಸಭಾ ಚುನಾವಣೆ ಗೆಲುವಿನ ಹಿನ್ನೆಲೆ ನಗರದಲ್ಲಿ ಕಾರ್ಯಕರ್ತರಿಗೆ ಹಮ್ಮಿಕೊಂಡ ಔತಣಕೂಟದ ಸಭೆಯಲ್ಲಿ ಮಾತನಾಡಿದ ಅವರು, ಯಾರೇ ಏನೇ ಭವಿಷ್ಯ ನುಡಿದರೂ ಮತ್ತೆ ದೇಶದ ಪ್ರಧಾನಿ ನರೇಂದ್ರ ಮೋದಿ ಆಗುತ್ತಾರೆ ಎಂದರು.
ಮೋದಿ ನೋಡಿ ಲೋಕಸಭಾ ಚುನಾವಣೆಯಲ್ಲಿ ವೋಟ್ ಹಾಕೋಣ. ವಿಜಯಪುರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಕಾರ್ಯಕರ್ತರಿಗೆ ಕರೆ ಕೊಟ್ಟರು. ಹೊಸ ಸರ್ಕಾರ ಬಂದಾಗ ಮೂರು ತಿಂಗಳ ಸಮಯ ಕೊಡಬೇಕಾಗುತ್ತದೆ. ಇನ್ಮುಂದೆ ನಮ್ಮ ಹೋರಾಟ ಶುರು ಎಂದರು.
ಈಚೆಗೆ ಒಬ್ಬರು ಬಂದು ನನ್ನ ವಿರುದ್ಧ ಆರೋಪ ಮಾಡಿದರು. ಏನೇ ಕೊಡೋದಿದ್ದರೇ ಗೋಶಾಲೆಗೆ ಕೊಡಿ ಅಂತ ಅಧಿಕಾರಿಗಳಿಗೆ ಹೇಳ್ತಿನಿ ಅಂತ ಆರೋಪಿಸಿದರು. ಕಳೆದ ಮೂರು ವರ್ಷಗಳಲ್ಲಿ ನಾನು ಯಾವುದೇ ವರ್ಗಾವಣೆ ದಂಧೆ ಮಾಡಿಲ್ಲ ಎಂದರು.
ನಾನು ಯಾವತ್ತೂ ವರ್ಗಾವಣೆ ದಂಧೆ ಮಾಡಿಲ್ಲ. ನನಗೆ ಬೇಕಾದ ಅಧಿಕಾರಿಗಳನ್ನು ಸರ್ಕಾರ ನನ್ನ ಕ್ಷೇತ್ರಕ್ಕೆ ಹಾಕಿಕೊಟ್ಟಾಗ ಅವರು ಬಂದು ಭೇಟಿಯಾಗಿ ಹೂಗುಚ್ಛ ಕೊಡತ್ತಿದರು. ಆಗ ಅಧಿಕಾರಿಗಳು ನಿಮ್ಮದು ( ಹಣ) ಏನಾದರೂ ಇದೆಯೇನು ಅಂತ ಕೇಳ್ತಿದ್ದರು. ಆಗ ನಾನು ಯಾವುದೇ ಹಣ ತಗೊಳ್ಳಲ್ಲ, ಗೋಶಾಲೆಗೆ ನಿಮ್ಮಿಂದ ಏನಾದರೂ ಸಹಾಯ ಮಾಡಿ ಎನ್ನುತ್ತಿದ್ದೆ ಎಂದರು.
ಗೋಶಾಲೆ ಹೆಸರಲ್ಲಿ ದುಡ್ಡು ತಿನ್ನುವ ಪರಿಸ್ಥಿತಿ ನನಗೆ ಬಂದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ ನಿರಾಣಿಗೆ ತಿರುಗೇಟು ನೀಡಿದರು.