ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ನುಡಿದಂತೆ ನಡೆದಿದ್ದೇವೆ, ಚುನಾವಣೆಗೂ ಮುನ್ನ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಬಳಿಕ ಮಾತನಾಡಿದ ಅವರು, ಇಂದು ನಾವು ಚುನಾವಣೆಗೂ ಮುನ್ನ ಕೊಟ್ಟ ವಾಗ್ದಾನದಂತೆ ನಡೆದುಕೊಂಡಿದ್ದೇವೆ. ಮನೆಯ ಮಹಾಲಕ್ಷ್ಮಿ ಖಾತೆಗೆ ಹಣ ಜಮಾ ಆಗಿದೆ ಎಂದರು.
ಇನ್ನು ಮುಂದೆ ಪ್ರತಿ ತಿಂಗಳು ಮನೆಯ ಯಜಮಾನಿ ಖಾತೆಗೆ ಎರಡು ಸಾವಿರ ರೂಪಾಯಿ ಸಂದಾಯ ಆಗಲಿದೆ. ಈ ಹಿಂದೆ ಹೇಳಿದಂತೆ ಶಕ್ತಿ ಯೋಜನೆ ಜಾರಿ ಮಾಡಿ ಮಹಳೆಯರು ಉಚಿತವಾಗಿ ಪ್ರಯಾಣಿಸುವಂತೆ ಮಾಡಿದ್ದೇವೆ, ಈಗ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ಗೃಹಲಕ್ಷ್ಮಿ ಯೋಜನೆಯನ್ನೂ ಜಾರಿ ಮಾಡಿದ್ದೇವೆ ಎಂದರು. ಇದರ ಜೊತೆಗೆ ಉಚಿತ ವಿದ್ಯುತ್, ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಶತ ದಿನಗಳು ಪೂರೈಸಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಅದರ ಜೊತೆಗೆ ಕೊಟ್ಟ ಗ್ಯಾರೆಂಟಿ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದೇವೆ. ಕಾಂಗ್ರೆಸ್ ಯಾವಾಗಲೂ ಮಹಿಳೆಯರ ಸಬಲೀಕರಣವನ್ನು ಬೆಂಬಲಿಸುತ್ತದೆ. ಈ ರಾಖಿ ಹಬ್ಬದಂದು ಎಲ್ಲಾ ಅಕ್ಕ-ತಂಗಿಯರಿಗೆ ಒಳ್ಳೆಯದಾಗಲಿ ಎಂದು ಹರಸಿದರು.