Monday, July 4, 2022

Latest Posts

ಸಿಎಂ ಖುರ್ಚಿಗಾಗಿ ಕಾಂಗ್ರೆಸ್ ಪಾದಯಾತ್ರೆ: ಸಚಿವ ಬಿ.ಶ್ರೀರಾಮುಲು

ಹೊಸದಿಗಂತ ವರದಿ,ಚಿತ್ರದುರ್ಗ:

ಕಾಂಗ್ರೆಸ್ ಪಾದಯಾತ್ರೆ ನಡೆಯುತ್ತಿರುವುದು ನೀರಿಗಾಗಿ ಅಲ್ಲ. ಸಿಎಂ ಕುರ್ಚಿ ಸಲುವಾಗಿ ಹಾಗೂ ಸಿದ್ದರಾಮಯ್ಯನವರ ವರ್ಚಸ್ಸು ಕಡಿಮೆ ಮಾಡಲು ಡಿ.ಕೆ.ಶಿವಕುಮಾರ್ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ದೂರಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ಕಲ್ಲಿನಲ್ಲಿ ಸಿದ್ದರಾಮಯ್ಯ, ಬಿಜೆಪಿ ಹಾಗೂ ಕುಮಾರಸ್ವಾಮಿ ಮೂರು ಹಕ್ಕಿಗಳನ್ನು ಹೊಡೆಯಲು ಡಿಕೆಶಿ ಮುಂದಾಗಿದ್ದಾರೆ. ಸಿದ್ದರಾಮಯ್ಯ ವರ್ಚಸ್ಸು ಕಡಿಮೆ ಮಾಡಲು ಡಿಕೆಶಿ ಪಾದಯಾತ್ರೆ ಕೈಗೊಂಡರು. ಆದರೆ ಸಿದ್ದರಾಮಯ್ಯ ತಮ್ಮ ವರ್ಚಸ್ಸು ಉಳಿಸಿಕೊಳ್ಳಲು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದರು.
ಮಹಾಮಾರಿ ಕೊರೋನಾ ಮೂರನೇ ಅಲೆಯು ಎಲ್ಲೆಡೆ ಅತೀ ವೇಗವಾಗಿ ಹರಡುತ್ತಿದೆ. ಆದರೂ ಸಹ ಕಾಂಗ್ರೇಸ್ ನಾಯಕರು ತಮ್ಮ ಅಸ್ಥಿತ್ವ್ವ ಉಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಾ ರೋಗ ಹೆಚ್ಚಾಗಲು ಕಾರಣರಾಗಿದ್ದಾರೆ. ಕೊರೋನಾ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಪಾದಯಾತ್ರೆ ಬೇಕಿತ್ತಾ? ಬಡಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈಗ ಮೇಕೆದಾಟು ಬಗ್ಗೆ ಮಾತನಾಡುವ ಕಾಂಗ್ರೇಸ್, ಅಧಿಕಾರದಲ್ಲಿದ್ದ ವೇಳೆ ಏಕೆ ಯೋಜನೆ ಕೈಗೆತ್ತಿಕೊಳ್ಳಲಿಲ್ಲ. ಅಲ್ಲದೇ ಮೇಕೆದಾಟು ಯೋಜನೆ ಕುರಿತು ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ. ಹೀಗಿರುವಾಗ ಪಾದಯಾತ್ರೆ ನಡೆಸುವ ಅಗತ್ಯತೆ ಏನಿದೆ? ತಮಿಳುನಾಡು ರಾಜ್ಯದಲ್ಲಿ ಕಾಂಗ್ರೇಸ್ ಆಡಳಿತ ನಡೆಸುತ್ತಿದ್ದು, ಅವರ ಸಿಎಂಗೆ ಹೇಳಿ ಕೇಸು ವಾಪಸ್ಸು ತೆಗೆಸುವಂತೆ ತಿಳಿಸಿದರೆ ಪ್ರಕರಣ ಇತ್ಯರ್ಥವಾಗಲಿದೆ ಎಂದು ಸಲಹೆ ನೀಡಿದರು.
ಕಾನೂನಿನ ಬಗ್ಗೆ ಮಾತನಾಡುವ ನಾಯಕರೇ ನಿಯಮ ಗಾಳಿಗೆ ತೂರಿದ್ದಾರೆ. ಹೈಕೋರ್ಟ್ ಸಹ ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಿದೆ. ಆದರೂ ಕೂಡ ಕಾಂಗ್ರೇಸ್ ನಾಯಕರು ಉದ್ಧಟತನ ತೋರುತ್ತಿದ್ದಾರೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಕಾಂಗ್ರೆಸ್ ಜನರ ಬಗ್ಗೆ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡು ಸರ್ಕಾರ ಯೋಜನೆಗೆ ಅಡ್ಡಿ ಮಾಡುತ್ತಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷ ಅಧಿಕಾರ ನಡೆಸುತ್ತಿವೆ. ತಮಿಳುನಾಡು ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಬೇಕಿದೆ. ಮೇಕೆ ದಾಟು ಯೋಜನೆಯನ್ನು ಬಿಜೆಪಿ ವಿರೋಧಿಸುತ್ತಿಲ್ಲ. ಆದರೂ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದು ದುರಂತ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss