ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಗರ ನಕ್ಸಲರ ಗ್ಯಾಂಗ್ ನಿಂದ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ.ಹೀಗಾಗಿ ಆ ಪಕ್ಷದ ಅಪಾಯಕಾರಿ ಅಜೆಂಡಾವನ್ನು ಸೋಲಿಸಲು ಜನರು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಒಗ್ಗೂಡಿದರೆ, ದೇಶವನ್ನು ವಿಭಜಿಸುವ ಅವರ ಕಾರ್ಯಸೂಚಿ ವಿಫಲಗೊಳ್ಳುತ್ತದೆ ಎಂದು ಅವರು (ಕಾಂಗ್ರೆಸ್ ನವರು) ಭಾವಿಸಿದ್ದಾರೆ. ಭಾರತಕ್ಕಾಗಿ ಒಳ್ಳೆಯ ಉದ್ದೇಶವನ್ನು ಹೊಂದಿರದ ಜನರೊಂದಿಗೆ ಕಾಂಗ್ರೆಸ್ ಎಷ್ಟು ನಿಕಟವಾಗಿ ನಿಂತಿದೆ ಎಂಬುದನ್ನು ಎಲ್ಲರೂ ನೋಡಬಹುದು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಕಾಂಗ್ರೆಸ್ ಮುಖಂಡರೊಬ್ಬರು ಕಿಂಗ್ ಪಿನ್ ಆಗಿರುವ ಶಂಕೆ ವ್ಯಕ್ತವಾಗಿದೆ.ಯುವಕರನ್ನು ಡ್ರಗ್ಸ್ ಕಡೆಗೆ ತಳ್ಳಿ ಬರುವ ಹಣದಿಂದ ಚುನಾವಣೆ ಎದುರಿಸಲು ಕಾಂಗ್ರೆಸ್ ಬಯಸಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ನ ಚಿಂತನೆ ಮೊದಲಿನಿಂದಲೂ ಪರಕೀಯವಾಗಿದೆ . ಬ್ರಿಟಿಷರ ಆಡಳಿತದಂತೆ ಈ ಕಾಂಗ್ರೆಸ್ ಕುಟುಂಬವೂ ದಲಿತರು, ಹಿಂದುಳಿದವರು, ಆದಿವಾಸಿಗಳನ್ನು ಸಮಾನರೆಂದು ಪರಿಗಣಿಸುವುದಿಲ್ಲ.ಭಾರತವನ್ನು ಒಂದೇ ಕುಟುಂಬ ಆಳಬೇಕು ಎಂದು ಕಾಂಗ್ರೆಸ್ ನವರು ಭಾವಿಸುತ್ತಾರೆ. ಆದ್ದರಿಂದಲೇ ಅವರು ಬಂಜಾರ ಸಮುದಾಯದ ಬಗ್ಗೆ ಯಾವಾಗಲೂ ಅವಹೇಳನಕಾರಿ ಧೋರಣೆ ತಾಳಿದ್ದಾರೆ ಎಂದು ಮೋದಿ ಹೇಳಿದ್ದಾರೆ.