ಹೊಸದಿಗಂತ ವರದಿ, ಮಡಿಕೇರಿ:
ತಾವೊಬ್ಬ ಪರಿಶುದ್ಧ ರಾಜಕಾರಣಿ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರು ಕಳೆದ 40 ವರ್ಷಗಳಿಂದ ಮುಖವಾಡದ ರಾಜಕಾರಣ ಮಾಡಿದ್ದಾರೆ ಎನ್ನುವುದು ಇದೀಗ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನದ ಸಹ ಸಂಚಾಲಕ ಪ್ರತಾಪ್ ಸಿಂಹ ನಾಯಕ್ ಒತ್ತಾಯಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಗರಣಗಳು ನಡೆಯುತ್ತಿವೆಯೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮ, ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ ಜೊತೆಗೆ ಮುಡಾ ಹಗರಣವೂ ಬೆಳಕಿಗೆ ಬಂದಿದೆ. ಅಧಿವೇಶನದಲ್ಲಿ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದ ಸಿಎಂ ಪಲಾಯನವಾದ ಮಾಡಿದ್ದಾರೆ ಎಂದು ಟೀಕಿಸಿದರು.
ತಾವೊಬ್ಬ ಪರಿಶುದ್ಧ ರಾಜಕಾರಣಿ ಎಂದು ಹೇಳಿಕೊಂಡೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆತ್ಮಸಾಕ್ಷಿ ಇದ್ದರೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದ ಅವರು ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಲ್ಲಿಯವರೆಗೆ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದರು.
10 ಕೋಟಿ ಸದಸ್ಯತ್ವದ ಗುರಿ: ಭಾರತೀಯ ಜನತಾ ಪಾರ್ಟಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಬೃಹತ್ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ದೇಶವ್ಯಾಪಿ 10 ಕೋಟಿ ಸದಸ್ಯರ ಗುರಿ ಹೊಂದಿದೆ. ಮೊದಲ ಹಂತದಲ್ಲಿ 8 ಕೋಟಿ ಸದಸ್ಯರನ್ನು ಹೊಂದಲಾಗಿದ್ದು, ಕರ್ನಾಟಕದಲ್ಲಿ 1.25 ಕೋಟಿ ಗುರಿಯಲ್ಲಿ 40 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ 70 ಸಾವಿರ ಗುರಿಯಲ್ಲಿ 30 ಸಾವಿರ ಮಂದಿ ಸದಸ್ಯರಾಗಿದ್ದಾರೆ. ಎರಡನೇ ಹಂತದ ಅಭಿಯಾನ ಅ.2 ರಿಂದ ಆರಂಭಗೊಂಡಿದ್ದು, ಅ. 15ಕ್ಕೆ ಅಂತಿಮಗೊಳ್ಳಲಿದೆ. ಈ ಅವಧಿಯಲ್ಲಿ ನಿಗದಿತ ಗುರಿ ಸಾಧಿಸಲಾಗುವುದು ಎಂದು ಪ್ರತಾಪ್ ಸಿಂಹ ನಾಯಕ್ ತಿಳಿಸಿದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಮಾಧ್ಯಮ ಪ್ರಮುಖ್ ಶಜಿಲ್ ಕೃಷ್ಣನ್, ವಕ್ತಾರ ಬಿ.ಕೆ.ಅರುಣ್ ಕುಮಾರ್, ಮನು ಮಂಜುನಾಥ್ ಹಾಜರಿದ್ದರು.