ಸುಳ್ಳು ಭರವಸೆಗಳನ್ನು ಜನರಿಗೆ ನೀಡುವಲ್ಲಿ ಕಾಂಗ್ರೆಸ್‌ನವರು ನಿಸ್ಸಿಮರು: ಗೋಪಾಲ ಕೃಷ್ಣ ಅಗರ್ವಾಲ್

ಹೊಸದಿಗಂತ ವರದಿ, ಮೈಸೂರು:

ಚುನಾವಣೆಗಳನ್ನು ಈಡೇರಿಸಲಾಗದಂತಹ ಆಕರ್ಷಕವಾದ ಸುಳ್ಳು ಭರವಸೆಗಳನ್ನು ನೀಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸಿಮರು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ ಕೃಷ್ಣ ಅಗರ್ವಾಲ್ ಟೀಕಿಸಿದರು.

ಶುಕ್ರವಾರ ಮಧ್ಯಾಹ್ನ ಮೈಸೂರಿನ ಚಾಮರಾಜಪುರಂನ ವಾಣಿವಿಲಾಸರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ರಾಜಸ್ತಾನ, ಮಣಿಪುರ, ಹಿಮಾಚಲ, ಛತ್ತೀಸ್‌ಘಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಜನರಿಗೆ ಈಡೇರಿಸಲಾಗದಂತಹ ಸುಳ್ಳು ಭರವಸೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದರು. ಆ ಮೂಲಕ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದರು. ಆದರೆ ಇಲ್ಲಿಯ ತನಕ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಯಾಕೇಂದರೆ ಅವುಗಳನ್ನು ಈಡೇರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲೂ ಅದೇ ರೀತಿಯ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಈಡೇರಿಸಲಾಗದಂತಹ ಆಕರ್ಷಕವಾದ ಯೋಜನೆಗಳನ್ನು ಜಾರಿಗೆ ತರುವುದಾಗಿ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಆದರೆ ಇದಕ್ಕೆಲ್ಲಾ ಕರ್ನಾಟಕದ ಮತದಾರರು ಮರುಳಾಗುವುದಿಲ್ಲ. ಇಲ್ಲಿನ ಜನರು ಬುದ್ಧಿವಂತರಿದ್ದಾರೆ. ಅವರ ಸುಳ್ಳು ಭರವಸೆಗಳಿಗೆ ಮನ್ನಣೆ ನೀಡುವುದಿಲ್ಲ. ಬಿಜೆಪಿಯ ಡಬಲ್ ಎಂಜಿನ್ ಮಾಡಿರುವ ಅಭಿವೃದ್ಧಿ ಕೆಲಸಗಳು, ಜಾರಿಗೆ ತಂದಿರುವ ಯೋಜನೆಗಳನ್ನು ತಿಳಿದುಕೊಂಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ 65 ವರ್ಷಗಳ ಈ ದೇಶ ಹಾಗೂ ಕರ್ನಾಟಕ ರಾಜ್ಯವನ್ನು ಆಳಿದೆ. ಸರ್ಕಾರ ಜಾರಿಗೆ ತಂದ ಯೋಜನೆಗಳ ಫಲ ಫಲಾನುಭವಿಗಳಿಗೆ ಸಂಪೂರ್ಣವಾಗಿ ಸಿಗುತ್ತಿರಲಿಲ್ಲ. ಮಧ್ಯವರ್ತಿಗಳ ಪಾಲಾಗುತ್ತಿತ್ತು. ಕೇಂದ್ರದಿoದ ಒಂದು ರೂಪಾಯಿ ಕೊಟ್ಟರೆ ಫಲಾನುಭವಿಗೆ ತಲುಪುತ್ತಿದದ್ದು ಕೇವಲ 15 ಪೈಸೆ ಮಾತ್ರ, ಉಳಿದ 85 ಪೈಸೆ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರೇ ಹೇಳಿದ್ದರು. ಹಾಗಾಗಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿಯೇ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿತ್ತು ಎಂದರು.

ಕಳೆದ 9 ವರ್ಷದಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಿದೆ. ಕೇಂದ್ರದ ಯೋಜನೆಗಳ ಫಲ ಸೋರಿಕೆಯಾಗುವುದನ್ನು ತಡೆಗಟ್ಟಿ, ನೇರವಾಗಿ ಅರ್ಹ ಫಲಾನುಭವಿಗೆ ತಲುಪುವಂತೆ ಮಾಡಿದ್ದಾರೆ. ಡಿಬಿಟಿ ಮೂಲಕ ಇಲ್ಲಿಯವರಿಗೆ 20 ಲಕ್ಷ ಕೋಟಿರೂ ನೇರವಾಗಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ತಲುಪಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ನವರು ಒಬಿಸಿ ವಿರೋಧಿಗಳು, ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಈ ಸಮುದಾಯಗಳಿಗೆ ನೀಡಿರುವ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರಿಗೆ ಸಂಸ್ಕೃತಿ ಎನ್ನುವುದೇ ಇಲ್ಲವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉಗ್ರವಾದಿಗಳಂತೆ ವೈಯಕ್ತಿಕವಾಗಿ ನಿಂದನೆ ಮಾಡುತ್ತಿದ್ದಾರೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಣಿಶಂಕರ್ ಅಯ್ಯರ್, ಸಿದ್ದರಾಮಯ್ಯ, ಈಗ ಮಲ್ಲಿಕಾರ್ಜುನ ಖರ್ಗೆಯವರು ನರೇಂದ್ರ ಮೋದಿಯವರನ್ನು ವೈಯಕ್ತಿಕವಾಗಿ ನಿಂದಿಸುವ ಮೂಲಕ ತಮ್ಮ ಸಂಸ್ಕೃತಿ ಏನೆಂದು ತೋರಿಸಿಕೊಟ್ಟಿದ್ದಾರೆ. ಇವರೆಲ್ಲಾ ಯಾವುದೇ ವ್ಯಕ್ತಿಗಾದರೂ ಮೊದಲು ಗೌರವ ಕೊಡುವುದನ್ನು ಕಲಿಯಬೇಕು, ಯಾರನ್ನೇ ಆದರೂ ವೈಯಕ್ತಿಕವಾಗಿ ನಿಂದಿಸುವುದನ್ನು ನಿಲ್ಲಿಸಬೇಕು. ಜನರು ನಿಮ್ಮ ಎಲ್ಲಾ ನಡೆ, ವರ್ತನೆಯನ್ನು ಗಮನಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಸಂವಾದಕರಾದ ಆನಂದ್, ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದ ಸಂಯೋಜಕ ನಾಗೇಶ್, ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್‌ಕುಮಾರ್, ಮಾಧ್ಯಮ ಜಿಲ್ಲಾ ಸಂಚಾಲಕ ಮಹೇಶ್‌ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!