September 26, 2026
Saturday, September 26, 2026
spot_img

ದಲಿತ ಅಧಿಕಾರಿಯೊಬ್ಬರು ಚುನಾವಣಾ ಆಯುಕ್ತರಾಗಿರುವುದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ: ಸಂಸದ ಕಾರಜೋಳ

ಹೊಸದಿಗಂತ ವರದಿ ವಿಜಯಪುರ:

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ದಲಿತ ಪ್ರತಿಭಾವಂತ ಅಧಿಕಾರಿ. ಓರ್ವ ದಲಿತ ವ್ಯಕ್ತಿ ಮುಖ್ಯ ಚುನಾವಣಾ ಆಯುಕ್ತರಾಗಿರುವುದು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಅವರ ಮೇಲೆ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ಈ ಹಿಂದೆ ಬಾಬು ಜಗಜೀವನರಾಂ ಅವರು ಪ್ರಧಾನಿಯಾಗುತ್ತಾರೆ ಎಂದು ಸಹಿಸಿಕೊಳ್ಳದೇ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು, ಸದ್ಯ ದಲಿತ ಸಮುದಾಯದ ವ್ಯಕ್ತಿ ಈ ಉನ್ನತ ಹುದ್ದೆಯಲ್ಲಿ ಕೂರುವುದು ಅವರಿಗೆ ಇಷ್ಟವಿಲ್ಲ, ದಲಿತರು ಅಷ್ಟೇ ಅಲ್ಲ ಮುಸ್ಲಿಂರು ಉನ್ನತ ಹುದ್ದೆಯಲ್ಲಿರಬಾರದು ಎನ್ನುವುದು ಕಾಂಗ್ರೆಸ್‌ನ ಕೀಳುಮಟ್ಟದ ಮನಸ್ಥಿತಿ, ಹೀಗಾಗಿಯೇ ಜ್ಞಾನೇಂದ್ರಕುಮಾರ್ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದರು.

ನ್ಯಾಯಾಲಯದಲ್ಲಿಯೂ ಬೇರೆ ಬೇರೆ ಪೀಠ ಇರುತ್ತದೆ, ಒಂದು ಪೀಠ ಇನ್ನೊಂದು ತೀರ್ಪು, ಇನ್ನೊಂದು ಪೀಠ ಇನ್ನೊಂದು ತೀರ್ಪು ನೀಡುತ್ತದೆ, ಇದು ಅಭಿಪ್ರಾಯ, ಅದೇ ರೀತಿ ಚುನಾವಣಾ ಆಯುಕ್ತರ ಅಭಿಪ್ರಾಯ ಭೇದ ಇರಬಹುದು ಎಂದರು.

ಅಲ್ಪಸಂಖ್ಯಾತ ಮುಸ್ಲಿಂರು ಹಾಗೂ ದಲಿತ ಬಾಂಧವರು ಕೇವಲ ಕಾಂಗ್ರೆಸ್ ವೋಟ್ ಬ್ಯಾಂಕ್, ನಿಜಕ್ಕೂ ಈ ದೇಶದ ಮುಸಲ್ಮಾನಿರಿಗೆ ಹಾಗೂ ದಲಿತರಿಗೆ ಅನ್ಯಾಯವಾಗಿದ್ದು, ಕಾಂಗ್ರೆಸ್‌ನಿಂದ ಎಂದರು.

ಓರ್ವ ಪ್ರತಿಭಾವಂತ ವಿದ್ಯಾರ್ಥಿ, ಅಸ್ಪೃಶ್ಯ ಸಮುದಾಯದಿಂದ ಬಂದ ವ್ಯಕ್ತಿ ಚುನಾವಣಾ ಆಯೋಗದಂತಹ ಶ್ರೇಷ್ಠ ಹುದ್ದೆಯಲ್ಲಿರುವುದು ಕಾಂಗ್ರೆಸ್‌ಗೆ ಸಹನೆಯಾಗುತ್ತಿಲ್ಲ ಎಂದರು.

ಡಿ.ದೇವರಾಜ್ ಅರಸು ಹಿಂದುಳಿದ ವರ್ಗದ ನಾಯಕರು ಅದನ್ನು ನಾನು ಒಪ್ಪಿಕೊಳ್ಳುವೆ, ಆದರೆ ಅವರ ನಡೆಯನ್ನು ಈ ಕಾಂಗ್ರೆಸ್ ಅನುಸರಿಸಿಲ್ಲ, ಕೇವಲ ಕಾಗದದ ಮೇಲೆ ಆರ್ಡರ್ ಮಾಡಿ ಏಕೈಕ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಪ್ರಚಾರ ಪಡೆದುಕೊಂಡರೇ ಹೊರತು ಡಿ.ದೇವರಾಜ್ ಅರಸು ಅವರು ಸಾಗಿದ ದಾರಿಯಲ್ಲಿ ಸಾಗಲಿಲ್ಲ ಎಂದರು.

ಚುನಾವಣಾ ಆಯೋಗದ ಆಯುಕ್ತರ ಮೇಲೆ ವಿನಾಕಾರಣ ಆರೋಪ ಹೊರೆಸಿವ ಮೂಲಕ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧೀ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಇರಿಸುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುವಲ್ಲಿ ತೊಡಗಿದ್ದಾರೆ, ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿರದೇ ಹೋಗಿದ್ದರೆ ನೀವು ಹೇಗೆ ಗೆದ್ದಿರಿ? ನಿಮ್ಮ ಸಹೋದರಿ ವೈಯನಾಡಿನಲ್ಲಿ ಹೇಗೆ ಗೆದ್ದರು? ಎಂದು ಪ್ರಶ್ನಿಸಿದರು.

ಕೆಲಸಕ್ಕೆ ಬಾರದ ಕ್ರೇಜ್ರಿವಾಲ್ ಈ ಕಾಂಗ್ರೆಸ್‌ನವರ ಜೊತೆ ಕೂಡಿದ್ದಾರೆ, ಈ ಹಿಂದೆ ನವದೆಹಲಿ, ಪಂಜಾಬ್‌ನಲ್ಲಿ ಆಪ್ ಹೇಗೆ ಗೆದ್ದಿತು? ಇದನ್ನು ಸಹ ಅವರು ಬಹಿರಂಗಪಡಿಸಬೇಕು ಎಂದರು.

ಇದನ್ನೂ ಓದಿ:

ವಿದೇಶ ಪೌರತ್ವದ ಭೂತ ಈ ನಕಲಿ ಗಾಂಧೀ ಕುಟುಂಬದ ಸದಸ್ಯರಿಗೆ ಬೆನ್ನು ಹತ್ತಿದೆ, ಇದನ್ನು ಡೈವೇರ್ಟ್ ಮಾಡುವ ಉದ್ದೇಶದಿಂದ ಈ ಎಲ್ಲ ವಿಷಯಗಳನ್ನು ಅವರು ಮುನ್ನೆಲೆಗೆ ತರುತ್ತಿದ್ದಾರೆ ಎಂದರು.

ಎಷ್ಟೋ ವರುಷಗಳ ಹಿಂದೆ ಅಸುನೀಗಿರುವ ಹೆಸರುಗಳು ಹಾಗೆಯೇ ಇದ್ದವು, ಕೆಲವರ ಹೆಸರುಗಳು ಎರಡು ಕಡೆ ಇದ್ದವು, ಆದರೆ ಈಗ ಎಲ್ಲವೂ ಶುದ್ಧೀಕರವಾಗಿದೆ ಎಂದರು.

ನಕಲಿ ಗಾಂಧೀ ಕುಟುಂಬದಿಂದ ನಾಗರಿಕ ಧಂಗೆ ಎಬ್ಬಿಸುವ ಷಡ್ಯಂತ್ರ 

ತಾನೇ ಅಧಿಕಾರದಲ್ಲಿರಬೇಕು ಎಂಬ ಉಮೇದಿನಲ್ಲಿದ್ದ ಗಾಂಧೀಜಿ ಅವರ ಹೆಸರು ಇರಿಸಿಕೊಂಡ ನಕಲಿ ಗಾಂಧೀ ಕುಟುಂಬದ ಷಡ್ಯಂತ್ರವನ್ನು ಪ್ರಧಾನಿ ಮೋದಿ ವಿಫಲಗೊಳಿಸಿದರು. ಈ ಕಾರಣಕ್ಕಾಗಿಯೇ ಹತಾಶೆಯಾಗಿರುವ ನಕಲಿ ಗಾಂಧೀ ಕುಟುಂಬ ನಾಗರಿಕ ಧಂಗೆ ಎಬ್ಬಿಸಿ, ಅರಾಜಕತೆ ಸೃಷ್ಟಿಸುವ ಹುನ್ನಾರ ಮಾಡುತ್ತಿದ್ದು, ಕೆಲವು ವಿದೇಶಿ ಶಕ್ತಿಗಳು ಸಹ ಈ ದ್ವೇಷಕ್ಕೆ ಕೈ ಜೋಡಿಸಿದೆ, ಈಗ ಚುನಾವಣಾ ಆಯುಕ್ತರ ಮೇಲೆ ಅವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.

Must Read