ಹೊಸದಿಗಂತ ವರದಿ ರಾಮನಗರ:
ತಾಲ್ಲೂಕಿನ ಬಿಡದಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ತಮಗೆ ಏಕೈಕ ಜೀವನಾಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ, ತಮಗೆ ಗೌರವಯುತವಾಗಿ ಸಾವನ್ನಪ್ಪಲು ದಯಾಮರಣ ನೀಡುವಂತೆ ಕೋರಿ ರೈತರು ಭಾರತದ ರಾಷ್ಟ್ರಪತಿಗಳು ಹಾಗೂ ಕರ್ನಾಟಕದ ರಾಜ್ಯಪಾಲರಿಗೆ ಸಾಮೂಹಿಕ ಮನವಿ ಪತ್ರ ಸಲ್ಲಿಸಿದ್ದಾರೆ.
ದಯಾಮರಣ ಪತ್ರದಲ್ಲೇನಿದೆ:
ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಸಹಿ ಸಂಗ್ರಹಿಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿರುವ ಪತ್ರದಲ್ಲಿ ತಮ ಅಳಲನ್ನು ತೋಡಿಕೊಂಡಿದ್ದಾರೆ. ಬಿಡದಿ ಹೊಬ್ಳಿಯ ರೈತರು ತಲತಲಾಂತರಗಳಿಂದ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಬಹುಬೆಳೆ ಬೆಳೆಯುವ ಫಲವತ್ತಾದ ಹಾಗೂ ನೀರಾವರಿ ಜಮೀನುಗಳು ನಮ್ಮ ಕುಟುಂಬದ ಜೀವನೋಪಾಯ, ಮಕ್ಕಳ ವಿದ್ಯಾಭ್ಯಾಸ ಮತ್ತು ಜಾನುವಾರುಗಳ ಪೋಷಣೆಗೆ ಏಕೈಕ ಆಧಾರವಾಗಿದೆ.

ಆಭಿವೃದ್ಧಿ ಹಾಗೂ ತಂತ್ರಜ್ಞಾನದ ಹೆಸರಿನಲ್ಲಿ ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ರೈತರಿಗೆ ಬರೆದ ಮರಣಶಾಸನವಾಗಿದೆ. ಕೃಷಿ ಭೂಮಿ ಕಸಿದುಕೊಳ್ಳುವುದು ಸಂವಿಧಾನದ 21ನೇ ವಿಧಿಯು ನೀಡುವ ೞಬದುಕುವ ಹಕ್ಕಿನ ನೇರ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಮ್ಮ ಕಣ್ಣೆದುರೇ ಭೂಮಿ ಕಳೆದುಕೊಂಡು, ನಿರುದ್ಯೋಗಿಗಳಾಗಿ ಅನ್ನ-ಆಹಾರವಿಲ್ಲದೆ ಬೀದಿಯಲ್ಲಿ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಲ್ಪಡುವುದಕ್ಕಿಂತ, ಸರ್ಕಾರದ ಸಮುಖದಲ್ಲೇ ಗೌರವಯುತವಾಗಿ ಪ್ರಾಣತ್ಯಾಗ ಮಾಡುವುದು ಲೇಸು ಎಂದು ರೈತರು ಕಣ್ಣೀರಿನ ಮೌಖಿಕ ಅರ್ಜಿಯಲ್ಲಿ ತಿಳಿಸಿದ್ದಾರೆ.
ರೈತರ ಪ್ರಮುಖ 4 ಹಕ್ಕೊತ್ತಾಯಗಳು
ಭೂಸ್ವಾಧೀನ ಅಧಿಸೂಚನೆ ರದ್ದು:
ಬಿಡದಿ ಸಾರ್ಟ್ ಸಿಟಿ ಯೋಜನೆಗಾಗಿ ಹೊರಡಿಸಲಾದ ಎಲ್ಲಾ ಪ್ರಾಥಮಿಕ ಹಾಗೂ ಅಂತಿಮ ಭೂಸ್ವಾಧೀನ ಅಧಿಸೂಚನೆಗಳನ್ನು ತಕ್ಷಣವೇ ಷರತ್ತೂ ರಹಿತವಾಗಿ ರದ್ದುಗೊಳಿಸಬೇಕು.
ರೈತರ ಒಪ್ಪಿಗೆ ಕಡ್ಡಾಯ:
ರೈತರ ಸಮತಿಯಿಲ್ಲದೆ ಯಾವುದೇ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಮತ್ತು ಜಮೀನುಗಳನ್ನು ಶಾಶ್ವತವಾಗಿ ಕೃಷಿಗಾಗಿಯೇ ಕಾಯ್ದಿರಿಸಬೇಕು.
ಬಂಜರು ಭೂಮಿ ಬಳಕೆ:
ಅಭಿವೃದ್ಧಿ ಯೋಜನೆಗಳಿಗೆ ಫಲವತ್ತಾದ ಕೃಷಿ ಭೂಮಿಯ ಬದಲಿಗೆ ಕೃಷಿಯೋಗ್ಯವಲ್ಲದ ಅಥವಾ ಬಂಜರು ಸರ್ಕಾರಿ ಭೂಮಿಯನ್ನು ಬಳಸಿಕೊಳ್ಳಬೇಕು.

ದಯಾಮರಣಕ್ಕೆ ಅನುಮತಿ:
ಸರ್ಕಾರವು ಈ ನ್ಯಾಯಯುತ ಬೇಡಿಕೆಗಳನ್ನು ಪುರಸ್ಕರಿಸದೆ ಬಲವಂತದ ಭೂಸ್ವಾಧೀನ ಮುಂದುವರಿಸಿದರೆ, ಸಂತ್ರಸ್ತ ರೈತರೆಲ್ಲರಿಗೂ ಸಾಮೂಹಿಕವಾಗಿ ದಯಾಮರಣ ಹೊಂದಲು ಅಧಿಕೃತ ಅನುಮತಿ ನೀಡಬೇಕು.
ಬಿಡದಿಯಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಮುಂದಾಗಿದ್ದು, ಯೋಜನೆ ಜಾರಿಗೆ ಪಟ್ಟು ಹಿಡಿದಿದೆ. ಆದರೆ, ಪ್ರತಿಪಕ್ಷ ಜೆಡಿಎಸ್ ಹಾಗೂ ಸ್ಥಳೀಯ ರೈತ ಹಿತರಕ್ಷಣಾ ಸಮಿತಿಗಳು ಕೃಷಿ ಭೂಮಿ ಸ್ವಾಧೀನವನ್ನು ತೀವ್ರವಾಗಿ ವಿರೋಧಿಸಿ ನಿರಂತರ ಧರಣಿ, ಸತ್ಯಾಗ್ರಹಗಳನ್ನು ನಡೆಸುತ್ತಾ ಬಂದಿವೆ.
ಇದನ್ನೂ ಓದಿ:
ರಾಜಕೀಯ ಒತ್ತಡಗಳ ನಡುವೆಯೂ ಸರ್ಕಾರದ ನಿಲುವು ಬದಲಾಗದ ಕಾರಣ, ಇದೀಗ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ರೈತರು ಅಂತಿಮ ಅಸ್ತ್ರವಾಗಿ ರಾಷ್ಟ್ರಪತಿಗಳ ಅಂಗಳಕ್ಕೆ ದಯಾಮರಣದ ಮನವಿ ಸಲ್ಲಿಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ರೈತರ ಮನವಿಯಲ್ಲಿ ಭೂಸ್ವಾಧೀನ ಅಧಿಸೂಚನೆಗಳನ್ನು ರದ್ದುಪಡಿಸುವುದು, ರೈತರ ಒಪ್ಪಿಗೆಯಿಲ್ಲದೆ ಭೂಮಿ ಪಡೆಯದಿರುವುದು ಮತ್ತು ಕೃಷಿಯೋಗ್ಯವಲ್ಲದ ಸರ್ಕಾರಿ ಭೂಮಿಯನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.



