ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ರಾಜ್ಯದಲ್ಲಿ ಹಣ, ಹೆಂಡ ಮತ್ತು ಸರ್ಕಾರಿ ಮಷಿನರಿಗಳ ಅವ್ಯಾಹತ ಬಳಕೆ ಈ ಫಲಿತಾಂಶಕ್ಕೆ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ಲೇಷಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಉಪ ಚುನಾವಣೆಗಳಲ್ಲಿ ಜನರು ಆಡಳಿತ ಪಕ್ಷದ ಜತೆ ಹೋಗೋದು ಸಾಮಾನ್ಯ. ಕ್ಷೇತ್ರದ ಅಭಿವೃದ್ಧಿ, ಹೆಚ್ಚಿನ ಅನುದಾನ ನಿರೀಕ್ಷಿಸಿ ಆಡಳಿತಾರೂಢ ಪಕ್ಷಕ್ಕೆ ಜೈಕಾರ ಹಾಕುತ್ತಾರೆ. ಆದರೆ, ಈ ಚುನಾವಣೆಯಲ್ಲಿ ಆಡಳಿತಾರೂಢರ ಹಣ-ಹೆಂಡ ಕೆಲಸ ಮಾಡಿದೆ ಎಂದು ಹೇಳಿದರು.
ಒಂದೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಯಲ್ಲಿ ಒಬ್ಬಿಬ್ಬರು ಸಚಿವರು, 10-15 ಶಾಸಕರು ಬೀಡು ಬಿಟ್ಟು ಹಣ ಬಲದಿಂದ ಚುನಾವಣೆ ಎದುರಿಸಿದ್ದಾರೆ. ಜತೆಗೆ ಸರ್ಕಾರದ ಮಶಿನರಿಗಳ ದುರ್ಬಳಕೆ ಆಗಿರುವುದೂ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಸೋತಿದ್ದೇವೆ ನಿಜ. ಆದರೆ, ನಾವು ಕಾಂಗ್ರೆಸ್ ಪಕ್ಷದವರ ಹಾಗೆ ಇವಿಎಂ ದೋಷ ಅಂತ ಹೇಳುತ್ತಿಲ್ಲ. ಉಪ ಚುನಾವಣೆಯಲ್ಲಿ ಆಡಳಿತಾರೂಢ ಅಲೆ ಸಾಮಾನ್ಯ. ಬಿಜೆಪಿಯೂ ಹಿಂದೆ ಅನೇಕ ಬಾರಿ ಉಪ ಚುನಾವಣೆಗಳಲ್ಲಿ ಗೆದ್ದಿದೆ. 2019ರ ಬಳಿಕ ನಡೆದಂತಹ ಉಪ ಚುನಾವಣೆಗಳಲ್ಲಿ ಗೆದ್ದಿದ್ದೇವೆ. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದಿದೆ. ಈ ಬಾರಿ ಜನ ತೀರ್ಮಾನ ಮಾಡಿದ್ದರೆ ಗೆಲ್ಲಬಹುದಿತ್ತು ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಧಾನಸಭೆ ಉಪ ಚುನಾವಣೆ ಸೋಲಿನ ಬಗ್ಗೆ ಬಿಜೆಪಿ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ. ಸೋಲಾದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷದವರ ಹಾಗೆ ಇವಿಎಂ ದೋಷ ಎನ್ನುವುದಿಲ್ಲ ಎಂದು ಹೇಳಿದ್ದಾರೆ.