ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಿಎಂ ಬಸವರಾಜ ಬೊಮ್ಮಾಯಿ ಆರೋಪ

ಹೊಸದಿಗಂತ ವರದಿ, ಮೈಸೂರು:
ಕಾಂಗ್ರೆಸ್ ಜನರಿಗೆ ನೆನಪಿನ ಶಕ್ತಿ ಕಡಿಮೆ ಎಂದು ತಿಳಿದಂತಿದೆ. ಆದರೆ ಕಾಂಗ್ರೆಸ್ ನ ಪರಿಚಯ ಜನರಿಗಿದೆ. ಅವರು ಹಿಂದೆ ಮಾಡಿದ್ದೆಲ್ಲವೂ ನೆನಪಿದೆ. ಮಹದಾಯಿ ಸಮಸ್ಯೆ ಉಂಟಾಗಲು ಕಾಂಗ್ರೆಸ್ ಕಾರಣ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾ ಯಿ ವಾಗ್ದಾಳಿ ನಡೆಸಿದರು.
ಮಂಗಳವಾರ ಮೈಸೂರಿನ ಹೊರವಲಯದಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಒಟ್ಟಾಗಿ ಹೋಗುವುದು ಅವರಿಗೆ ಸಂಬಂಧಿಸಿದ ಆಂತರಿಕ ವಿಚಾರ. ಇದರಲ್ಲಿ ನಾವು ಹೇಳುವುದೇನೂ ಇಲ್ಲ.. ಮಹದಾಯಿ, ಕೃಷ್ಣಾ ಹಾಗೂ ಎಸ್.ಸಿ/ ಎಸ್.ಟಿ ವಿಚಾರಗಳಿಗೆ ಸಂಬಂಧಿಸಿದಂತೆ ಎರಡು ಸಮಾವೇಶಗಳನ್ನು ಮಾಡುವುದಾಗಿ ಹೇಳಿದರು. ಮಹದಾಯಿ ಯೋಜನೆ ಸಮಸ್ಯೆಯಾಗಲು ಕಾಂಗ್ರೆಸ್ ಕಾರಣ. ಅವರ ಅಧಿನಾಯಕಿ ಸೋನಿಯಾ ಗಾಂಧಿ ಗೋವಾ ಚುನಾವಣೆಗೆ ಹೋಗಿ ಮಹದಾಯಿಯ ಒಂದು ಹನಿ ನೀರನ್ನೂ ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ ಎಂದು ಹೇಳಿದರು. ಅವರಿಗೆ ಈ ರೀತಿ ಮಾತನಾಡಲು ಯಾವ ನೈತಿಕ ಹಕ್ಕಿದೆ. ರಾಜ್ಯದಲ್ಲಿ 5 ವರ್ಷ ಅಧಿಕಾರವಿದ್ದಾಗಲೂ ಏನೂ ಮಾಡಲಾಗಲಿಲ್ಲ. ಎಸ್.ಸಿ | ಎಸ್.ಟಿ ಸಮುದಾಯದ 40 ವರ್ಷಗಳ ಬೇಡಿಕೆಯತ್ತಲೂ ತಿರುಗಿ ನೋಡಿರಲಿಲ್ಲ ಎಂದು ದೂರಿದರು.

 5 ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರಿ..?
ಸಿದ್ದರಾಮಯ್ಯ ತಾವು ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ಅವರು 5 ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ಏನು ಮಾಡಿದ್ರು? ವರದಿಯನ್ನು ಮಂಡಿಸುವ ಸಮಾವೇಶವೊಂದರಲ್ಲಿ ಭಾಗಿಯಾಗಿ ಕೇವಲ ದೀಪ ಹಚ್ಚಿ ಬಂದು ಸುಮ್ಮನಾಗಿದ್ದರು. ಆ ಬಗ್ಗೆ ಮಾತನಾಡಲೂ ಇಲ್ಲ. ಈ ಎಲ್ಲಾ ವಿಚಾರಗಳು ಜನರ ಮನದಾಳದಲ್ಲಿದೆ. ಅದನ್ನು ಮುಚ್ಚಿಹಾಕಲು ಸಮಾವೇಶ ಮಾಡುತ್ತಾರೆ. ಜನರನ್ನು ಪದೇ ಪದೇ ಮರಳು ಮಾಡಲು ಸಾಧ್ಯವಿಲ್ಲ. ಹಿಂದೆ ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಮ್ಮೆಯಾದರೂ ಒತ್ತಾಯ ಮಾಡಿದ್ದರೇ ಎಂದು ಪ್ರಶ್ನಿಸಿದರು.
ಮೀಸಲಾತಿ ಬಗ್ಗೆ ಗೊಂದಲ ಇಲ್ಲ:
ಎಸ್.ಸಿ/ ಎಸ್.ಟಿ ಮೀಸಲಾತಿ ಬಗ್ಗೆ ಗೊಂದಲಗಳೇನೂ ಇಲ್ಲ. ಇದನ್ನು ಕಾಂಗ್ರೆಸ್ ಹುಟ್ಟುಹಾಕುತ್ತಿದೆ. ಅವರಿಗೆ ಎಸ್.ಸಿ/ ಎಸ್.ಟಿ ಮತಗಳು ತಪ್ಪಿಹೋಗುತ್ತಿವೆ ಎನ್ನುವ ಆತಂಕದಿಂದ ಹೀಗೆ ಮಾಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!