ಮೇಕೆದಾಟು ಕಾಂಗ್ರೆಸ್ ಹೊಣೆಗೇಡಿತನದ ಸಾಕ್ಷ್ಯ ಶೀಘ್ರ ಬಿಡುಗಡೆ: ಸಚಿವ ಕಾರಜೋಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಅಂದು ಕೃಷ್ಣೆಗೆ (ಕೂಡಲ ಸಂಗಮ) ಇಂದು ಕಾವೇರಿಗೆ (ಮೇಕೆದಾಟು) ಸಿಕ್ಕ ಅವಕಾಶವನ್ನು ವ್ಯರ್ಥ್ಯಗೊಳಿಸಿ ಅರ್ಥಹೀನ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮಿತ್ರರು ಅಧಿಕಾರದಲ್ಲಿ ಇದ್ದಾಗ, ಮೇಕೆದಾಟು ಕುರಿತು ಹೊಣೆಗೇಡಿತನಕ್ಕೆ ಸಾಕ್ಷ್ಯ ನಮ್ಮಲ್ಲಿದೆ. ಕಾದು ನೋಡಿ, ಕೆಲವೇ ದಿನಗಳಲ್ಲಿ ಸ್ಪೋಟಕ ಮಾಹಿತಿ ಹೊರಹಾಕುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಇದೆಲ್ಲವೂ ರಾಜ್ಯದ ಹಿತದೃಷ್ಟಿಯಿಂದ ಮತ್ತು ರಾಜ್ಯದ ಜನತೆಗೆ ಸತ್ಯ ಗಮನಕ್ಕೆ ತರುವುದಕ್ಕಾಗಿ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಮತ್ತು ಗಿಮಿಕ್ ಮಾಡುತ್ತಿರುವುದು ಇದೇ ಮೊದಲಲ್ಲ. 2013 ಜನವರಿ 7ರಿಂದ 14ರವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ರಾಜಕೀಯ ಗಿಮಿಕ್ ಮಾಡಿದ್ದರು ಎಂದು ಟೀಕಿಸಿದರು.

ಅಧಿಕಾರದಲ್ಲಿದ್ದಾಗ ಆಲಸ್ಯತನ ತೋರುವುದು, ಕಡತ ಯಜ್ಞ ಮಾಡದೇ ಕಾಲಹರಣ ಮಾಡುವುದು, ವಿರೋಧಪಕ್ಷದಲ್ಲಿ ಬಂದಾಗ ಅನಗತ್ಯವಾದ ಆಂದೋಲನಗಳನ್ನು ಕೈಗೊಳ್ಳುವುದು ಕಾಂಗ್ರೆಸ್ಸಿಗರ ಜಾಯಮಾನ ಎಂದು ಸಚಿವರು ವ್ಯಂಗ್ಯವಾಡಿದರು. ತಾವು ಅಧಿಕಾರದಲ್ಲಿದ್ದಾಗ ಕಾವೇರಿ ಕಣಿವೆಯ ರೈತರ ಮತ್ತು ಜನಹಿತದ ಕೆಲಸಗಳನ್ನು ವಿಳಂಬದ್ರೋಹದ ಮೂಲಕ ಮುಂದೂಡಿ ಈಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡುವುದು ಜನರಿಗೆ ತಿಳಿಯುತ್ತದೆ ಎಂದು ಸಚಿವರು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!