ಕಾಂಗ್ರೆಸ್ ಸುಳ್ಳು ಹರಡುತ್ತಿದೆ, ನಾನು ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿಲ್ಲ: ಅಮಿತ್ ಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಡಾ. ಬಿ.ಆರ್​. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಅಮಿತ್ ಶಾ, ಸಂವಿಧಾನ ವಿರೋಧ ಹಾಗೂ ಅಂಬೇಡ್ಕರ್ ವಿರೋಧಿಯಾದ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ನಾನು ಅಂಬೇಡ್ಕರ್ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಮಾತನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ , ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷವು ಸಂಸತ್ತಿನಲ್ಲಿ ನಾನು ಮಾಡಿದ ಟೀಕೆಗಳನ್ನು ತಿರುಚಿದೆ ಮತ್ತು ಅಂಬೇಡ್ಕರ್ ವಿರೋಧಿ ನಿಲುವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯಸಭೆಯಲ್ಲಿ ಸಂವಿಧಾನದ ಚರ್ಚೆಯ ವೇಳೆ ಮಾಡಿದ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, ‘ನನ್ನ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ. ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡುತ್ತದೆ, ನಾನು ಅಂಬೇಡ್ಕರ್ ವಿರುದ್ಧ ಮಾತನಾಡಿಲ್ಲ. ಸಂಸತ್ತಿನಲ್ಲಿ ಮಾಡಿದ ಕಾಮೆಂಟ್‌ಗಳನ್ನು ಕಾಂಗ್ರೆಸ್ ತಿರುಚಿದ ರೀತಿ ಅತ್ಯಂತ ಖಂಡನೀಯವಾಗಿದೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಪಕ್ಷವಾಗಿದೆ. ಬಿಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡದಿರಲು ಕಾಂಗ್ರೆಸ್ ಪ್ರಯತ್ನಿಸಿದೆ. ನಿನ್ನೆಯಿಂದ ಕಾಂಗ್ರೆಸ್ ಸತ್ಯವನ್ನು ತಿರುಚಿ ಪ್ರಸ್ತುತಪಡಿಸುತ್ತಿದೆ. ಕಾಂಗ್ರೆಸ್ ಬಿ.ಆರ್ ಅಂಬೇಡ್ಕರ್ ವಿರೋಧಿಯಾಗಿದ್ದು, ಮೀಸಲಾತಿ ಮತ್ತು ಸಂವಿಧಾನದ ವಿರುದ್ಧವಾಗಿದೆ ಎಂದರು.

ಕಾಂಗ್ರೆಸ್ ವೀರ ಸಾವರ್ಕರ್ ಅವರನ್ನು ಕೂಡ ಅವಮಾನಿಸಿದೆ. ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಕಾಂಗ್ರೆಸ್ ಎಲ್ಲಾ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸಿದೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.

ನನ್ನ ಹೇಳಿಕೆಯನ್ನು ತಿರುಚಿ ಪ್ರಸ್ತುತಪಡಿಸಲಾಗಿದೆ. ಈ ಹಿಂದೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಎಡಿಟೆಡ್ ಹೇಳಿಕೆಗಳನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತ್ತು. ಚುನಾವಣೆ ನಡೆಯುತ್ತಿರುವಾಗ ನನ್ನ ಹೇಳಿಕೆಯನ್ನು ಎಐ ಬಳಸಿ ಎಡಿಟ್ ಮಾಡಲಾಗಿತ್ತು. ಇಂದು ಅವರು ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ಹರಡುತ್ತಿದ್ದಾರೆ. ನನ್ನ ಸಂಪೂರ್ಣ ಹೇಳಿಕೆಯನ್ನು ಸಾರ್ವಜನಿಕರ ಮುಂದೆ ಇಡಲು ನಾನು ವಿನಂತಿಸುತ್ತೇನೆ. ನಾನು ಎಂದಿಗೂ ಅಂಬೇಡ್ಕರ್ ಅವರನ್ನು ಅವಮಾನಿಸುವ ರೀತಿಯ ಹೇಳಿಕೆ ನೀಡಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೆಲ್ಲ ನಾವು ಅಂಬೇಡ್ಕರ್ ಅವರ ತತ್ವಗಳನ್ನು ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್‌ನ ಈ ನೀಚ ಪ್ರಯತ್ನಕ್ಕೆ ಬೆಂಬಲ ನೀಡಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಮಂಗಳವಾರ 75 ವರ್ಷಗಳ ಸಂವಿಧಾನದ ಕುರಿತು ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು.ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಫ್ಯಾಶನ್ ಆಗಿದೆ. ಒಂದುವೇಳೆ ಅವರು ಅಂಬೇಡ್ಕರ್ ಬದಲು ಈ ರೀತಿ 100 ಬಾರಿ ದೇವರ ಹೆಸರು ಜಪ ಮಾಡಿದ್ದರೆ 7 ಜನ್ಮಗಳಲ್ಲೂ ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಿದ್ದರು ಎಂದು ಹೇಳಿದ್ದರು. ಈ ಹೇಳಿಕೆ ವಿಪಕ್ಷಗಳ ನಾಯಕರ ಟೀಕೆಗೆ ಕಾರಣವಾಯಿತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!