Sunday, December 4, 2022

Latest Posts

ʼಜೋಡೋʼ ಯಾತ್ರೆ ನೆಪದಲ್ಲಿ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಹುನ್ನಾರ: ಸಚಿವರಾದ ಮಾಧುಸ್ವಾಮಿ, ನಾಗೇಶ್ ಆರೋಪ

ಹೊಸದಿಗಂತ ವರದಿ, ತುಮಕೂರು:
ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ಬಿಜೆಪಿ ಶಾಸಕರು, ಸಚಿವರಿರುವ ಕ್ಷೇತ್ರಗಳಿಗೆ ಮಾತ್ರ ಸಿಮೀತವಾಗಿದ್ದು, ವಿನಾ ಕಾರಣ ಬಿಜೆಪಿ ಮತ್ತು ಆರ್.ಎಸ್.ಎಸ್.ನ್ನು ಎಳೆದು ತರಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ.
ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾದಯಾತ್ರೆ ಬಿಜೆಪಿ ಶಾಸಕರಿರುವ ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಹಿರಿಯೂರು ಮೂಲಕ ಹಾದು ಹೋಗುತ್ತಿದೆ. ಮಹಾತ್ಮಗಾಂಧಿ ಅವರು ದೊಡ್ಡ ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ಕೈಗೊಂಡಿದ್ದರು. ಆದರೆ ಭಾರತ್ ಜೋಡೋ ಯಾತ್ರೆಗೆ ನಿದಿಷ್ಟ ಗುರಿಯೇ ಇಲ್ಲ. ವಿನಾಕಾರಣ ಬಿಜೆಪಿ, ಆರ್.ಎಸ್.ಎಸ್.ನ್ನು ಟೀಕಿಸುವುದೇ ಯಾತ್ರೆಯ ಗುರಿಯಾಗಿದೆ ಎಂದರು.
ಭಾರತ ಎಂದಾದರೂ ಒಡೆದಿದ್ದರೆ ಅಲ್ಲವೇ ಸರಿಪಡಿಸಲು. ಸ್ವಾತಂತ್ರದ ಉದ್ದೇಶಕ್ಕೆ ದೇಶ ವಿಭಜನೆಯಾದಾಗ ಇವರು ಯಾಕೆ ಯಾತ್ರೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಸಚಿವದ್ವಯರು, 2023ರ ಕರ್ನಾಟಕ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆ ನಂತರ ದೇಶದಿಂದ ಕಾಂಗ್ರೆಸ್ ಪಕ್ಷ ಕಳೆದು ಹೋಗುವುದು ನಿಶ್ಚಿತ. ಹಾಗಾಗಿ ಕಾಂಗ್ರೆಸ್ ಜೋಡೋ ಮಾಡುತಿದ್ದಾರೆ ಎಂದು ಟೀಕಿಸಿದರು.
ರಾಹುಲ್‌ಗಾಂಧಿ ಅವರು ಸಾರ್ವಕರ್ ಬ್ರಿಟಿಷರಿಂದ ಪಿಂಚಿಣಿ ಪಡೆದಿದ್ದರು ಎಂದು ಹೇಳುತ್ತಾರೆ. ಹಾಗಾದರೆ ಸ್ವಾತಂತ್ರಕ್ಕಾಗಿ ಆವರು ಹೋರಾಟ ಮಾಡಿದ್ದು ಸುಳ್ಳೇ ಎಂದು ಪ್ರಶ್ನಿಸಿದ ಸಚಿವರು, ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಇಂದು ಇಲ್ಲ. ದೇಶದ ಸ್ವಾತಂತ್ರಕ್ಕಾಗಿ ಎಲ್ಲ ಸಂಘಟನೆಗಳು ಕೆಲಸ ಮಾಡಿವೆ.ರಾಹುಲ್‌ಗಾಂಧಿ ಅವರು ತಮ್ಮ ರಾಜಕೀಯ ಜೀವನದ ಅಂತಿಮ ಯಾತ್ರೆಯನ್ನು ಕೈಗೊಂಡಿದ್ದಾರೆ. ಉತ್ತರ ಪ್ರದೇಶ,ಬಿಹಾರಗಳಲ್ಲಿ ಇವರ ಯಾತ್ರೆ ಏಕೀಲ್ಲ ಎಂದು ಪ್ರಶ್ನಿಸಿದರು.
ಕಾಶ್ಮೀರದ ವಿಚಾರವಾಗಿ 370ನೇ ವಿಧಿಯನ್ನು ಜಾರಿಗೆ ತಂದು ದೇಶವನ್ನು ವಿಭಜನೆ ಮಾಡಿದ್ದು ಕಾಂಗ್ರೆಸ್, ಸಿಖ್ ಸಮುದಾಯ ದೆಹಲಿಯಲ್ಲಿ ಹೇಗೆ ಬದುಕಿತ್ತು ಎಂಬುದನ್ನು ಇವರು ನೆನೆಪಿಸಿಕೊಳ್ಳಬೇಕಿದೆ. ಶೇ.40 ಎಂಬ ಭ್ರಷ್ಟಾಚಾರದ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ಯಾತ್ರೆ ನೆಪದಲ್ಲಿ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಸಚಿವ ಮಾಧುಸ್ವಾಮಿ ಮತ್ತು ಬಿ.ಸಿ.ನಾಗೇಶ್ ಆರೋಪಿಸಿದರು.
ಕರ್ನಾಟಕದ ಅಭಿವೃದ್ದಿಗೆ ಟಿಪ್ಪು ಸುಲ್ತಾನ್‌ಗಿಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಹಾಗಾಗಿ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನೀಡಲಾಗಿದೆ. ದೇಶ ಒಡೆಯುವ ತುಕಡೆ ಗ್ಯಾಂಗ್ ಜೊತೆ ಸೇರಿ ರಾಹುಲ್ ಗಾಂಧಿ ಪಾದಯಾತ್ರೆ ನಡೆಸುತಿದ್ದು, ಅದರಲ್ಲೇ ಗೊತ್ತಾಗುತ್ತದೆ ಯಾವ ರೀತಿ ಭಾರತ್ ಜೋಡೋ ಮಾಡುತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಭೈರಪ್ಪ, ಎಸ್.ಸಿ.ಮೋರ್ಚಾ ರಾಜ್ಯ ಉಪಾಧ್ಯಕ್ಷ ಗಂಗರಾಜು, ಜಿಲ್ಲಾ ಮಾಧ್ಯಮ ಪ್ರಮುಖ್ ಟಿ.ಆರ್ ಸದಾಶಿವಯ್ಯ, ಮಾಧ್ಯಮ ಸಹ ಪ್ರಮುಖ ಜೆ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!