ಮೀಸಲಾತಿ ಹೆಚ್ಚಳ: ಸರ್ಕಾರದ ನಿರ್ಧಾರಕ್ಕೆ ಬಾಗಲಕೋಟೆಯಲ್ಲಿ ಸಂಭ್ರಮಾಚರಣೆ

ಹೊಸದಿಗಂತ ವರದಿ, ಬಾಗಲಕೋಟೆ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಜಿಲ್ಲಾ ವಾಲ್ಮೀಕಿ ಮಹಾಸಭಾದಿಂದ ನಗರದಲ್ಲಿ ಶನಿವಾರ ವಿಜಯೋತ್ಸವ ಆಚರಿಸಲಾಯಿತು.
ನಗರ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ್ದ ವಾಲ್ಮೀಕಿ ಮಹಾಸಭಾದವರು ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಮೀಸಲಾತಿ ಹೆಚ್ಚಳ ಮಾಡಿದ ಸರ್ಕಾರಕ್ಕೆ ಹಾಗೂ ವಾಲ್ಮೀಕಿ ಶ್ರೀಗಳಿಗೆ, ಡಾ.ಅಂಬೇಡ್ಕರವರಿಗೆ ಜೈಕಾರದ ಘೋಷಣೆಗಳನ್ನು ಹಾಕಿದರು.
ವಿಜಯೋತ್ಸವ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಾಲ್ಮೀಕಿ ಸಮಾಜದ ನಾಯಕ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, 40 ವರ್ಷಗಳ ಕಾಲ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ನಡೆದಿತ್ತು. ಜನಗಣತಿ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಬಹಳ ದಿನಗಳಿಂದ ಹೋರಾಟ ಮಾಡಲಾಗಿತ್ತು. ಪೂಜ್ಯ ಪ್ರಸನ್ನನಾಂದ ಸ್ವಾಮೀಜಿಯವರು 241 ದಿನ ನಿರಂತರ ಹೋರಾಟ ಹಾಗೂ ಸರ್ಕಾರದ ಮೇಲೆ ಒತ್ತಡ ಹಾಕಿ, ಎಸ್ಟಿ, ಎಸ್ಸಿಯವರಿಗೆ ಮೀಸಲಾತಿ ಸಿಗಬೇಕು ಎಂದು ಹೋರಾಟ ಮಾಡಿದ್ದರ ಫಲವಾಗಿ ಸರ್ಕಾರ ಎಸ್ಟಿ, ಎಸ್ಸಿಯವರಿಗೆ ಮೀಸಲಾತಿ ಹೆಚ್ಚಿಸಿದೆ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಬಿಜೆಪಿ ಕೋರ್ ಕಮೀಟಿ ಸದಸ್ಯರಾದ ಸಿ.ಟಿ.ರವಿ, ಕೋಟಾಶ್ರೀನಿವಾಸ ಪೂಜಾರಿ ,ಜೆ.ಸಿ.ಮಾಧವಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಶ್ರೀರಾಮುಲು ಸೇರಿದಂತೆ ಇನ್ನಿತರರು ಮೀಸಲಾತಿ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಅವೆಲ್ಲರಿಗೂ ಸಮಾಜದಿಂದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ವಾಲ್ಮೀಕಿ ಸಮಾಜದ ಮುಖಂಡ ಶಂಭುಗೌಡ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಹೆಚ್ಚಿಸಿರುವ ಮೀಸಲಾತಿ ಪ್ರಮಾಣದಿಂದ ವಾಲ್ಮೀಕಿ ಸಮಾಜಕ್ಕೆ ಇನ್ನು ಮುಂದೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಳವಾದಂತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಿದ್ದರಿಂದ ಸುಮಾರು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ ಎಂದರು.
ಜಿಲ್ಲಾ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ದ್ಯಾಮಣ್ಣ ಗಾಳಿ ಮಾತನಾಡಿ, ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದ ಸ್ವಾಮೀಜಿಯವರು ನಡೆಸಿದ ಹೋರಾಟದ ಫಲವಾಗಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಸಮಾಜಕ್ಕೆ ಹಾಗೂ ಎಸ್ಸಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ತುಂಬಾ ಸಂತಸವಾಗಿದೆ ಎಂದರು.
ಅಹೋರಾತ್ರಿ ಧರಣಿಯನ್ನು ಶ್ರೀಗಳು ಮಾಡಿದ್ದಾರೆ. ಎಸ್ಟಿ ಸಮಾಜಕ್ಕೆ ಶೇ.3ರಷ್ಟು ಇದ್ದ ಮೀಸಲಾತಿಯನ್ನು 7.5 ಗೆ ಏರಿಸಿರುವುದು ಹಾಗೂ ಎಸ್ಸಿ ಸಮಾಜಕ್ಕೆ ಇದ್ದ ಶೇ.15 ಇರುವುದನ್ನು ಶೇ.17ಕ್ಕೆ ಮೀಸಲಾತಿ ಏರಿಕೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಸರ್ಕಾರದ ಮಂತ್ರಿಗಳು, ಶಾಸಕರಿಗೆ ಸಮಾಜದಿಂದ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!