ಹೊಸದಿಗಂತ ವರದಿ, ಕಲಬುರಗಿ:
ಇಡೀ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಮೆಟ್ಟಿಲುಗಳನ್ನು ಹಾಕಿದ್ದೆ,ಕಾಂಗ್ರೆಸ್ ಪಕ್ಷವೆಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಹಾಕಿದ ಮೆಟ್ಟಿಲುಗಳನ್ನೆ, ಇಂದು ಎಲ್ಲ ರಾಜಕೀಯ ಪಕ್ಷಗಳು ಹತ್ತುತ್ತಿವೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಕಟ್ಟರ್ ಹಿಂದುತ್ವವಾದಿ, ಹಿಂದೂತ್ವದ ಬಗ್ಗೆ ಪ್ರಖರತೆಯಿಂದ ಮಾತನಾಡುತ್ತಾರೆ.ಹೀಗಾಗಿ ಅವರನ್ನು ಗುರಿಯಾಗಿಸಿಕೊಂಡು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದರು.
ದೇಶ ಅಭಿವೃದ್ಧಿ ಆಗಬೇಕಾದರೆ ಭ್ರಷ್ಟಾಚಾರ ಕ್ಕೆ ಕಡಿವಾಣ ಹಾಕಬೇಕಾಗಿದೆ. ತೇರಿಬಿ ಚುಪ್-ಮೇರಿಬಿ ಚುಪ್ ಎನ್ನುವಂತಹ ಶಾಸನ ಹಾಕಿಕೊಳ್ಳಲಾಗಿದ್ದು, ಈಶ್ವರಪ್ಪ ಅವರನ್ನು ಹೇಗಾದರೂ ಮಾಡಿ ಹೆಣಿಸಬೇಕು ಎಂಬ ಹುನ್ನಾರ ಮಾಡಲಾಗಿದೆ ಎಂದರು.
ಪ್ರಕರಣದ ಸಂಪೂರ್ಣ ತನಿಖೆಯನ್ನು ಮಾಡಬೇಕು. ಕಾಮಗಾರಿ ಪೂರ್ಣ ಆಗಿದೆಯಾ ,ಅಥವಾ ಇಲ್ಲವೋ ತನಿಖೆ ಮಾಡಬೇಕೆಂದು ಒತ್ತಾಯಿಸಿದ ಅವರು, ಕಾಮಗಾರಿಗಳನ್ನು ಮಾಡದೇ ಬಿಲ್ ಎತ್ತಿಕೊಳ್ಳುವುದು ದೊಡ್ಡ ಅಪರಾಧ. ತನಿಖೆ ಸೂಕ್ತವಾಗಿ ನಡೆಯಬೇಕು. ತನಿಖೆ ನಂತರವೇ ಸತ್ಯಾಸತ್ಯತೆ ಹೊರಬರಲು ಸಾಧ್ಯವೆಂದರು.