ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸಂಸದರು ಗುರುವಾರ ಹಕ್ಕುಚ್ಯುತಿ ನೋಟಿಸ್‌ ನೀಡಿದ್ದಾರೆ.

ಲೋಕಸಭೆಯಲ್ಲಿ ಪಕ್ಷದ ಸಚೇತಕ ಮಾಣಿಕಂ ಟ್ಯಾಗೋರ್‌ ಅವರು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಹಕ್ಕುಚ್ಯುತಿ ನೋಟಿಸ್‌ ಸಲ್ಲಿಸಿದ್ದು, ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ (ಟ್ವಿಟರ್) ಬರೆದುಕೊಂಡಿದ್ದಾರೆ.

ರಾಹುಲ್‌ ಗಾಂಧಿ ಅವರು 2008ರಲ್ಲಿ ಮಹಾರಾಷ್ಟ್ರದಲ್ಲಿ ಕೃಷಿಕ ಮಹಿಳೆ ಕಲಾವತಿ ಬಂಡೂರಕರ್ ಅವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ವಿವರಿಸುವಾಗ ಸಚಿವ ಶಾ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಹಕ್ಕುಚ್ಯುತಿ ನೋಟಿಸ್‌ ನೀಡಿದೆ.

ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿ ಕೃಷಿ ಕ್ಷೇತ್ರದಲ್ಲಿನ ಸಂಕಷ್ಟದಿಂದಾಗಿ ಕಲಾವತಿ ಅವರ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮನೆಗೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ, ಕಲಾವತಿ ಅವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ್ದರು.

ಬುಧವಾರ ನಡೆದ ಚರ್ಚೆ ವೇಳೆ, ರಾಹುಲ್‌ ಗಾಂಧಿ ಅವರನ್ನು ರಾಜಕೀಯವಾಗಿ ಬೆಳೆಸುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳ ಪೈಕಿ 13 ‘ವೈಫಲ್ಯ’ಗಳನ್ನು ಪಟ್ಟಿ ಮಾಡಿದ್ದ ಶಾ, ಕಲಾವತಿ ಅವರನ್ನು ಭೇಟಿ ಮಾಡಿದ್ದ ಪ್ರಸಂಗವನ್ನೂ ಉಲ್ಲೇಖಿಸಿದ್ದರು.

‘ಕಲಾವತಿ ಅವರಿಗೆ ಮೋದಿ ಸರ್ಕಾರ ಮನೆ ನೀಡಿತ್ತು. ವಿವಿಧ ಸರ್ಕಾರಿ ಯೋಜನೆಗಳ ಲಾಭವನ್ನೂ ಅವರಿಗೆ ನೀಡಲಾಗಿತ್ತು’ ಎಂದು ಶಾ ಹೇಳಿದ್ದರು. ಈ ವಿಷಯವಾಗಿ ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಕಲಾವತಿ ಅವರು ಮಾತನಾಡಿರುವ ವಿಡಿಯೊವನ್ನು  ಹಂಚಿಕೊಂಡಿದೆ.

‘ಬಡತನದಿಂದ ಸಂಕಷ್ಟ ಎದುರಿಸುತ್ತಿದ್ದ ನನಗೆ ರಾಹುಲ್ ಗಾಂಧಿ ನೆರವು ನೀಡಿದ್ದಾರೆ’ ಎಂದು ಕಲಾವತಿ ಹೇಳಿರುವುದು ವಿಡಿಯೋದಲ್ಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಅಮಿತ್ ಶಾಗೆ ಹಕ್ಕುಚ್ಯುತಿ ನೋಟಿಸ್‌ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!