Tuesday, March 28, 2023

Latest Posts

ಮತಬ್ಯಾಂಕ್ ಗಾಗಿ ಕಾಂಗ್ರೆಸ್, ಜೆಡಿಎಸ್‍ನಿಂದ ಉರಿಗೌಡ್ರು, ನಂಜೇಗೌಡರು ಇರಲೇ ಇಲ್ಲ ಎಂಬ ವಾದ: ಶೋಭಾ ಕರಂದ್ಲಾಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಇವತ್ತು ಸ್ವಾತಂತ್ರ್ಯ ಹೋರಾಟಗಾರರು, ಕೆಟ್ಟದ್ದನ್ನು ಕಂಡಾಗ ಸಿಡಿದೆದ್ದವರು, ಧರ್ಮದ ಉಳಿವಿಗಾಗಿ ಹೋರಾಟ ಮಾಡಿದ ಉರಿಗೌಡ್ರು ಮತ್ತು ನಂಜೇಗೌಡ್ರ ಬಗ್ಗೆ ಚರ್ಚೆಯಾಗುತ್ತಿದೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಉರಿಗೌಡ್ರು ಮತ್ತು ನಂಜೇಗೌಡರು ಇರಲೇ ಇಲ್ಲ ಎಂದು ವಾದ ಮಾಡುತ್ತಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೊನ್ನೆ 11ನೇ ತಾರೀಕಿನಂದು ಕಾಂಗ್ರೆಸ್ಸಿನ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಅಟ್ ಪಿಎಂ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ. ಸ್ವಾಗತಕ್ಕಾಗಿ ಕಪೋಲಕಲ್ಪಿತ ಪಾತ್ರಗಳಾದ ಉರಿಗೌಡ ಮತ್ತು ನಂಜೇಗೌಡರ ಸ್ವಾಗತ ಕಮಾನ್ ಹಾಕಿರುವುದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಕರ್ನಾಟಕಕ್ಕೆ ಮಾಡಿದ ಅವಮಾನ ಎಂದು ಪ್ರತಿಪಾದಿಸಿದ್ದಾರೆ ಎಂದು ಟೀಕಿಸಿದರು.
ಉರಿಗೌಡ್ರು ಮತ್ತು ನಂಜೇಗೌಡರು ನಮ್ಮ ಸ್ವಾಭಿಮಾನ, ಮಂಡ್ಯದ ಸ್ವಾಭಿಮಾನ, ಮೈಸೂರಿನ ಸ್ವಾಭಿಮಾನ. ಕರ್ನಾಟಕದ ಸ್ವಾಭಿಮಾನ; ದೇಶದ ಸ್ವಾಭಿಮಾನ ಉಳಿಸುವುದಕ್ಕಾಗಿ ಹೋರಾಟ ಮಾಡಿದ ವೀರರು ಎಂದು ಸಿದ್ದರಾಮಯ್ಯರಿಗೆ ತಿಳಿಸುವುದಾಗಿ ಹೇಳಿದರು.

ಉರಿಗೌಡ್ರು ಮತ್ತು ದೊಡ್ಡ ನಂಜೇಗೌಡರು ಟಿಪ್ಪುವನ್ನು ಕೊಂದರು ಎಂದು ಹೇಳುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಜೆಡಿಎಸ್ ಹೇಳಿದೆ. ಅಂತ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆಂದು ಜೆಡಿಎಸ್ ಆರೋಪಿಸಿದೆ ಎಂದು ತಿಳಿಸಿದರು.

ನಾನಿವತ್ತು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಕೇಳಲು ಇಚ್ಛಿಸುತ್ತೇನೆ ಎಂದ ಅವರು, ಉರಿ ಗೌಡ ಮತ್ತು ನಂಜೇಗೌಡರ ಹೋರಾಟದ ಬಗ್ಗೆ ‘ಸುವರ್ಣ ಮಂಡ್ಯ’ ಎಂಬ ಪುಸ್ತಕ ಬಿಡುಗಡೆಯಾಗಿದೆ. 2006ರಲ್ಲಿ ಇದರ ಎರಡನೇ ಆವೃತ್ತಿ ಬಿಡುಗಡೆಯಾದಾಗ ಈ ಸುವರ್ಣ ಮಂಡ್ಯ ಪುಸ್ತಕದ ಬಿಡುಗಡೆಯನ್ನು ದೇವೇಗೌಡರು ಮಾಡಿದ್ದರು. ಕುಮಾರಸ್ವಾಮಿಯವರು ಆವತ್ತು ಮುಖ್ಯಮಂತ್ರಿಗಳಾಗಿದ್ದರು. ಮಂತ್ರಿಗಳಾಗಿದ್ದ ಚೆಲುವರಾಯಸ್ವಾಮಿ ಅವರು ಅದಕ್ಕೆ ಮುನ್ನುಡಿಯನ್ನು ಬರೆದಿದ್ದರು ಎಂದು ವಿವರ ನೀಡಿದರು.

ಆ ಪುಸ್ತಕದಲ್ಲಿ ಉರಿ ಗೌಡ ಮತ್ತು ದೊಡ್ಡ ನಂಜೇಗೌಡರ ಹೋರಾಟ ಕುರಿತು ಮೈಸೂರಿಗೆ ಉಪಕುಲಪತಿಗಳಾಗಿದ್ದ ಡಾಕ್ಟರ್ ಕೆ ಜವರೇಗೌಡರು ಬರೆಯುತ್ತಾರೆ. ಕುವೆಂಪು ಅವರ ಶಿಷ್ಯರಾಗಿ ದೇಜಗೌಡ ಅವರು ಕರ್ನಾಟಕ ಸಾಹಿತ್ಯದ ಲೋಕದಲ್ಲಿ ಒಂದು ದೊಡ್ಡ ಹೆಸರು ಮಾಡಿದವರು ಮತ್ತು ಗೌರವ ಪಡೆದವರು. ಈ ಪುಸ್ತಕವನ್ನು ದೇವೇಗೌಡರು ಅವತ್ತು ಬಿಡುಗಡೆ ಮಾಡುವಾಗ ಉರಿ ಗೌಡ್ರ ಮತ್ತು ನಂಜೇಗೌಡರ ಕುರಿತು ಕುಮಾರಸ್ವಾಮಿಯವರು ಆವತ್ತು ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.

ಆ ಪುಸ್ತಕ ಬಿಡುಗಡೆ ಮಾಡಲು ಯಾಕೆ ಹೋದರು. ಎಂದು ಕೇಳಿದರು. ಕುಮಾರಸ್ವಾಮಿಯವರು ಯಾವತ್ತೂ ಉರಿಗೌಡರು -ನಂಜೇಗೌಡರ ಬಗ್ಗೆ ಯಾಕೆ ವಿರೋಧ ಮಾಡಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಮಂಡ್ಯದ ಮತ್ತು ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಆಗುವಂತಹ ಕೆಲಸ ಮಾಡಿದ್ದಾರೆಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ವಾಸ್ತವವಾಗಿ ಟಿಪ್ಪು ಕನ್ನಡ ವಿರೋಧಿ, ಧರ್ಮವಿರೋಧಿ ಮಂಗಳೂರಿಗೆ ತೆರಳಿ ನರಮೇಧ ಮಾಡಿದ್ದ. ಗರ್ಭಿಣಿಯರ ಮೇಲೆ ದಬ್ಬಾಳಿಕೆ ಮಾಡಿದ, ಕೊಡವರನ್ನು ನರಮೇಧ ಮಾಡಿದ ಟಿಪ್ಪುವಿನ ವಿರುದ್ಧ ಹೋರಾಟ ನಡೆದಿತ್ತು ಎಂದು ತಿಳಿಸಿದರು.

ಇವತ್ತಿಗೂ ಕೂಡ ಮೇಲುಕೋಟೆ ಅಯ್ಯಂಗಾರರು ದೀಪಾವಳಿಯನ್ನು ಆಚರಿಸುವುದಿಲ್ಲ. ಯಾಕೆ ಅಂತ ನೀವು ಯಾರಾದರೂ ಕೇಳಿದ್ದೀರಾ ಎಂದು ಪ್ರಶ್ನಿಸಿದರು. ನಮ್ಮ ರಾಜ್ಯದ ನೇತೃತ್ವ ವಹಿಸಿದ ನಾಯಕರು ಚರಿತ್ರೆಯನ್ನು ಓದಬೇಕಲ್ಲವೇ? ದೀಪಾವಳಿಯ ಸಂದರ್ಭದಲ್ಲಿ ಮೇಲುಕೋಟೆಯ ಸಾವಿರಾರು ಅಯ್ಯಂಗಾರ್ ಜನಾಂಗದವರನ್ನು ಕೊಲ್ಲಲಾಗಿತ್ತು. ಕೆಲವರನ್ನು ತಲೆಕೆಳಗಾಗಿ ಗಾಳಿಗೆ ನೇತುಹಾಕಿ ಕೊಂದಂತಹ ವ್ಯಕ್ತಿ ಟಿಪ್ಪು ಆಗಿದ್ದ ಎಂದು ಆಕ್ಷೇಪಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ಮುಖ್ಯ ವಕ್ತಾರ ಮಹೇಶ್, ರಾಜ್ಯ ಬಿಜೆಪಿ ಎಸ್. ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!