ಸುಗ್ರೀವಾಜ್ಞೆ ವಿರುದ್ಧ ಹೋರಾಡಲು ಕಾಂಗ್ರೆಸ್ ಸಾಥ್: ವಿಪಕ್ಷಗಳ ಸಭೆಗೆ ಆಮ್ ಆದ್ಮಿ ಪಾರ್ಟಿ ಎಂಟ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಬಿಜೆಪಿ ವಿರುದ್ಧ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈಗಾಗಲೇ ವಿಪಕ್ಷಗಳು ಒಂದಾಗಿದ್ದು, ಮೊದಲ ಸಭೆ ಕೂಡ ನಡೆಸಿದ್ದರು.

ಇದೀಗಬೆಂಗಳೂರಿನಲ್ಲಿ ಸೋಮವಾರ ಎರಡನೇ ಸಭೆ ನಡೆಯಲಿದ್ದು, ಇದಕ್ಕೆ ಭಾಗವಹಿಸುವುದಾಗಿ ಆಮ್ ಆದ್ಮಿ ಪಾರ್ಟಿ (AAP) ಭಾನುವಾರ ಘೋಷಿಸಿದೆ.

ಸುಗ್ರೀವಾಜ್ಞೆ ವಿಚಾರದಲ್ಲಿ ದೆಹಲಿಯ ಎಎಪಿ ಸರ್ಕಾರವನ್ನು ಬೆಂಬಲಿಸಲು ಕಾಂಗ್ರೆಸ್ ಒಪ್ಪಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಲಾಗಿದೆ. ಇದಕ್ಕೂ ಮುನ್ನ, ಸುಗ್ರೀವಾಜ್ಞೆ ವಿಚಾರದಲ್ಲಿ ದೆಹಲಿ ಸರ್ಕಾರವನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ನಾಯಕ ಪವನ್ ಖೇರಾ ತಿಳಿಸಿದ್ದರು.

ಎಎಪಿಯ ರಾಜಕೀಯ ಕ್ರಿಯಾ ಸಮಿತಿ ಸಭೆಯಲ್ಲಿ ಪ್ರತಿ ಅಂಶವನ್ನು ವಿವರವಾಗಿ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯು ಸ್ಪಷ್ಟವಾಗಿ ರಾಷ್ಟ್ರವಿರೋಧಿಯಾಗಿದೆ ಎಂದು ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ನಿಂದ ತೊಡಗಿ ಆರ್‌ಜೆಡಿ, ಜೆಡಿಯು, ಎನ್‌ಸಿಪಿ, ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಅವರ ಶಿವಸೇನೆ ಎಲ್ಲರೂ ಈ ದೇಶವಿರೋಧಿ ಸುಗ್ರೀವಾಜ್ಞೆಯ ವಿರುದ್ಧ ಧ್ವನಿ ಎತ್ತಿದ್ದಾರೆ.

ಪಾಟ್ನಾದಲ್ಲಿ ನಡೆದ ಮೊದಲ ಪ್ರತಿಪಕ್ಷಗಳ ಸಮಾವೇಶದ ನಂತರ, ಸುಗ್ರೀವಾಜ್ಞೆ ವಿಚಾರದಲ್ಲಿ ದೆಹಲಿ ಸರ್ಕಾರ ಮತ್ತು ಎಎಪಿಯನ್ನು ಬೆಂಬಲಿಸದ ಪ್ರತಿಪಕ್ಷಗಳ ವಿರುದ್ಧ ಕೇಜ್ರಿವಾಲ್ ಪಕ್ಷ ಆಕ್ರೋಶ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್ ಹೊರತುಪಡಿಸಿ ಎಲ್ಲಾ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಸುಗ್ರೀವಾಜ್ಞೆ ವಿರುದ್ಧ ಹೋರಾಟಕ್ಕೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದವು. ಇದೀಗ ಕಾಂಗ್ರೆಸ್ ಸಹ ಅದೇ ಹಾದಿ ಹಿಡಿದಿದ್ದು, ಎಎಪಿ ಕೂಡ ಪ್ರತಿಪಕ್ಷಗಳ ಒಕ್ಕೂಟ ಸೇರಲು ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!