ಕಾಂಗ್ರೆಸ್ ನಾಯಕರು ಕಲಾಪಕ್ಕೆ ಸಹಕಾರ ನೀಡುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ

ದಿಗಂತ ವರದಿ ಶಿವಮೊಗ್ಗ :

ಹಿಜಾಬ್ ಮತ್ತು ಕೆ.ಎಸ್. ಈಶ್ವರಪ್ಪ ನವರ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ವಿಧಾನಸಭಾ ಕಲಾಪ ಹಾಳು ಮಾಡುತ್ತಿದ್ದು, ಇದನ್ನು ನಿಲ್ಲಿಸಿ ಕಲಾಪಕ್ಕೆ ಸಹಕಾರ ನೀಡುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಈಶ್ವರಪ್ಪ ಹಾಗೂ ಯಡಿಯೂರಪ್ಪರಂತಹ ನಾಯಕರು ರಾಷ್ಟ್ರ ಭಕ್ತಿಯ ಬಗ್ಗೆ ಕಾಂಗ್ರೆಸ್ ನಾಯಕರಿಂದ ಕಲಿಯಬೇಕಿಲ್ಲ. ಧ್ವಜದ ವಿಷಯ ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು‌ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಲಾಲ್ ಚೌಕ್ ನಲ್ಲಿ ರಾಷ್ಟ್ರ ಧ್ವಜ ಹಾರಿಸಿ ದೇಶ ಪ್ರೇಮ ಮೆರೆದ ಈಶ್ವರಪ್ಪನವರ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ. ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಸುಳ್ಳು ಹೇಳಿ ಜನರ ಗಮನ ಸೆಳೆಯಲಾಗುತ್ತಿದೆ ಎಂದರು.

ಹಿಜಾಬ್ ಪ್ರಕರಣದಲ್ಲಿಯೂ ಕೂಡ ಮಕ್ಕಳ‌ ಮನಸ್ಸು ಕೆಡಿಸುವ ಕೆಲಸ ಕಾಂಗ್ರೆಸ್ ನಾಯಕರು ಹಾಗು ಪಿಎಫ್ ಐ ಸಂಘಟನೆಯಿಂದ‌ ನಡೆಯುತ್ತಿದೆ. ತಣ್ಣಗಾಗಿದ್ದ ವಿಷಯವನ್ನು ಪುನಃ ಪುನಃ ಕೆದಕಿ ದೊಡ್ಡದು ಮಾಡಲಾಗುತ್ತಿದೆ. ಇದರ ಹಿಂದಿರುವ ಬೇರುಗಳು ತುಂಬಾ ಆಳವಾಗಿರುವುದು ಗೊತ್ತಾಗಿದೆ ಎಂದರು.

ಸಮವಸ್ತ್ರದ ಬಗ್ಗೆ ನ್ಯಾಯಾಲಯದಿಂದ ಮಧ್ಯಂತರ ಆದೇಶವಾಗಿದ್ದರೂ ಕೂಡ ಅದನ್ನು ಪಾಲನೆ ಮಾಡುವ ಮನಸ್ಥಿತಿ‌ ಇಲ್ಲ. ಉಡುಪಿಯಲ್ಲಿ ಕೇವಲ ಆರು ವಿದ್ಯಾರ್ಥಿನಿಯರಿಂದ ಆರಂಭವಾದ ಕಿಡಿ ಇಂದು ಇಡೀ ರಾಜ್ಯ ಆವರಿಸುವಂತೆ ಮಾಡಲಾಗಿದೆ.ಹತ್ತು ವರ್ಷದ ಹಿಂದೆಯೇ ಕೇರಳದ ಸಿಎಂ ಪಿಎಫ್ ಐ ಉಗ್ರ ಸಂಘಟನೆಯಿಂದಿಗೆ ನಂಟು ಹೊಂದಿದೆ ಎಂದು‌ ಹೇಳಿದ್ದರು. ಹಿಜಾಬ್ ವಿಷಯದಲ್ಲಿ ಅದು ನಿಜವಾಗುತ್ತಿದೆ ಎಂಬ ಅನುಮಾನ‌ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!