ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣ: ತನಿಖೆ ಸಿಬಿಐಗೆ ವಹಿಸುವ ಕುರಿತು ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲಾರದ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಮೃತರ ಪತ್ನಿ ಡಾ. ಎಸ್. ಚಂದ್ರಕಲಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಇದೊಂದು ನಿಗೂಢ ಕೊಲೆ ಪ್ರಕರಣ. ಯಾರು? ಏತಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬೆಲ್ಲಾ ಸಂಗತಿಗಳು ರಹಸ್ಯವಾಗಿ ಉಳಿದಿವೆ. ಪ್ರಕರಣವನ್ನು ಮೊದಲು ಸ್ಥಳೀಯ ಪೊಲೀಸರು 37 ದಿನಗಳ ಕಾಲ ತನಿಖೆ ನಡೆಸಿದರು ಎಂದು ತಿಳಿಸಿದರು.

ಬಳಿಕ ಅರ್ಜಿದಾರರು ಪ್ರಕರಣವನ್ನು ಸಿಬಿಐಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರವು ಸಿಬಿಐ ನೀಡುವುದರ ಬದಲಿಗೆ ಸಿಐಡಿಗೆ ಹಸ್ತಾಂತರಿಸಿತು. ಸಿಐಡಿ ಪ್ರಕಣವನ್ನು 50 ದಿನಗಳ ಕಾಲ ತನಿಖೆ ನಡೆಸಿ ಬಳಿಕ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಆದರೆ, ದೋಷಾರೋಪಟ್ಟಿಯಲ್ಲಿ ಹಲವಾರು ಅನುಮಾನಗಳಿವೆ. ಸತ್ಯವನ್ನು ಗೌಪ್ಯವಾಗಿಡುವ ಪ್ರಯತ್ನ ನಡೆದಿದೆ ಎಂದು ಪೀಠಕ್ಕೆ ಹೇಳಿದರು.

ದೋಷಾರೋಪ ಪಟ್ಟಿಯಲ್ಲಿ ಒಂದಲ್ಲಾ-ಎರಡೆಲ್ಲಾ 23 ತಪ್ಪುಗಳು ಸ್ಪಷ್ಟವಾಗಿ ತಿಳಿದುಬರುತ್ತದೆ. ಪ್ರಕರಣದಲ್ಲಿ 9 ಜನ ಆರೋಪಿಗಳಿದ್ದಾರೆ ಎಂದು ಹೇಳಲಾಗಿದೆ. ದೋಷಾರೋಪಪಟ್ಟಿಯಲ್ಲಿ ಸುಪಾರಿ ನೀಡಿ ಕೊಲೆಗೈದಿರುವುದೋ ಅಥವಾ ಇಲ್ಲವೋ ಎಂಬ ವಿವರಣೆ ನೀಡಿಲ್ಲ. ಪ್ರಕರಣ ಸಂಬಂಧ ಅರ್ಜಿದಾರರು ತಮಗೆ ಇಂತವರ ಮೇಲೆ ಸಂದೇಹವಿದೆ ಎಂಬುದಾಗಿ ದೂರು ನೀಡಿದರು ಕೂಡ ಆ ಬಗ್ಗೆ ತನಿಖೆ ನಡೆಸುವ ಗೋಜಿಗೆ ಹೋಗಿಲ್ಲ . ಘಟನಾ ಸಂಬಂಧ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಘಟನೆ ಸಂಭವಿಸಿದ ಐದು ದಿನದ ಬಳಿಕ ದಾಖಲಿಸಲಾಗಿದೆ.ಆರೋಪಿಗಳು ಕೃತ್ಯ ಎಸಗುವ ಮೊದಲು ಮದ್ಯಪಾನ ಮಾಡಿದ್ದಾರೆ ಎಂದು ಸ್ವಯಂ ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೆ ಪೂರಕವಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡಿಲ್ಲ. ಸ್ಥಳ ಮಹಜರು ( ಪಂಚನಾಮೆ ನಡೆಸುವ) ಸಂದರ್ಭ ಪ್ರತ್ಯಕ್ಷದರ್ಶಿಗಳ ದಾಖಲಿಸುವಲ್ಲಿ ಎಡವಿದ್ದಾರೆ. ಪೆಪ್ಪರ್ ಸ್ಪೈ ಬಳಸಿರುವುದಾಗಿ ಆರೋಪಿಗಳು ಖುದ್ದು ಹೇಳಿಕೆ ನೀಡಿದ್ದಾರೆ. ಅದನ್ನು ಎಲ್ಲಿಂದ ಖರೀದಿ ಮಾಡಿದ್ದರು? ಹೇಗೆ ಬಳಕೆ ಮಾಡಿದ್ದರು ಎಂಬ ಬಗ್ಗೆ ಎಲ್ಲಿಯೂ ವಿವರಣೆಯಿಲ್ಲ. ಘಟನೆ ಸಂಭವಿಸಿದ ಕೆಲವು ದಿನಗಳ ಬಳಿಕ ಥಲವಾರ್ ಅನ್ನು ಎಎಸ್‌ಎಲ್‌ಗೆ ಕಳುಹಿಸಲಾಗಿದೆ. ಆದರೆ, ಆ ದಿನವು ಕೂಡ ಆರೋಪಿಗಳ ವಸ ಎಎಸ್‌ಎಲ್‌ಗೆ ಕಳುಹಿಸಿರಲಿಲ್ಲಆರೋಪಿಗಳ ಸಿಡಿಆರ್ ಕಲೆ ಹಾಕಿಲ್ಲ. ತನಿಖೆಯ ಯಾವ ಹಂತದಲ್ಲೂ ಪ್ರಕರಣ ಸಾಬೀತುಪಡಿಸುವ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವಿವರಿಸಿದರು.

ಪ್ರಕರಣವನ್ನು ಸಿಬಿಐ ತನಿಖೆ ನೀಡಬೇಕೆಂದು ಸಿಎಂಗೆ ಹಾಗೂ ಗ್ರಹಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ, ಸೂಕ್ತ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದ ಸತ್ಯಾಸತ್ಯತೆಗಳನ್ನು ಅರಿತು ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರ ಪರ ವಾದ ಮಂಡಿಸಿದ ಎಸ್‌ಪಿಪಿ ಸಿ.ಎಚ್.ಹನುಂತರಾಯ, ದೋಷಾರೋಪಣಾ ಪಟ್ಟಿಯನ್ನು ಸ್ವತಃ ನಾನೇ ಪರಿಶೀಲಿಸಿದ್ದೇನೆ. ಅದರಲ್ಲಿ ನೂರಾರು ಗೊಂದಲಿವಿರುವುದು ಸತ್ಯ. ಅರ್ಜಿದಾರರು 27 ವರ್ಷದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಕೆ ತನ್ನ ಪತಿಯ ಸಾವಿನ ದವಡೆಗೆ ನೂಕಿದವರನ್ನು ಪತ್ತೆ ಹಚ್ಚುವ ಸಲುವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕೊಲೆಯಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎಂದೂ ಹೇಳಿದ್ದಾರೆ. ಆರೋಪಿಗಳು ಯಾರದ್ದೋ ಮಾತಿಗೆ ತಲೆಬಾಗಿ ಈ ಕೃತ್ಯ ಎಸಗಿದ್ದಾರೆ. ತನಿಖಾ ಅಧಿಕಾರಿಗಳು ನ್ಯಾಯಯಾಲಯದ ಉದ್ದೇಶಕ್ಕೆ ದ್ರೋಹ ಬಗೆದಿದ್ದಾರೆ. ಯಾರೋ ಪರದೆ ಹಿಂದೆ ನಿಂತು ಇದೆಲ್ಲವನ್ನು ನಡೆಸುತ್ತಿದ್ದಾರೆ. ಸಿಬಿಐ ತನಿಖೆ ಅವಕಾಶ ನೀಡುವುದರಿಂದ ಪರದೆ ಹಿಂದೆ ಅಡಗಿ ಕೂತವರನ್ನು ಎಳೆದು ತರಬಹುದಾಗಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು.

ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಸ್ವತಃ ಎಚ್.ಹನುಂತರಾಯ ಅವರು ಸಿಬಿಐ ತನಿಖೆಗೆ ವಹಿಸುವಂತೆ ಕೇಳಿಕೊಂಡಿದ್ದಾರೆ. ಇಂತಹ ಸರ್ಕಾರಿ ವಕೀಲರು ಕಾಣ ಸಿಗುವುದು ಅತ್ಯಂತ ಅಪರೂಪ. ಅಚ್ಚುಕಟ್ಟಾಗಿ ವೃತ್ತಿಪರತೆ ನಿಭಾಯಿಸುವವರು ಮಾತ್ರ ಸತ್ಯದ ಪರ ಈ ರೀತಿ ನಿಲುವು ಪಡೆದುಕೊಳ್ಳಲು ಸಾಧ್ಯ ಅಭಿಪ್ರಾಯಪಟ್ಟು ವಿಚಾರಣೆ ಕಾಯ್ದಿರಿಸುವುದಾಗಿ ಹೇಳಿತು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!