ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ನಾನಾ ಅಡೆತಡೆಗಳು ಎದುರಾಗುತ್ತಿದ್ದು, ಅತ್ತ ಟೂರ್ನಿಯನ್ನು ಆಡಲು ಪಾಕಿಸ್ತಾನಕ್ಕೆ ಹೋಗಲು ಭಾರತ ಹಿಂದೇಟು ಹಾಕುತ್ತಿದ್ದರೆ , ಇತ್ತ ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಒಪ್ಪುತ್ತಿಲ್ಲ.
ಇದರ ನಡುವೆ ಪಾಕಿಸ್ತಾನಕ್ಕೆ ಐಸಿಸಿ ಖಡಕ್ ಎಚ್ಚರಿಕೆ ನೀಡಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ವಿವಾದಿತ ಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯುವಂತಿಲ್ಲ ಎಂದು ಐಸಿಸಿ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ದುಬೈನಿಂದ ಇಸ್ಲಾಮಾಬಾದ್‌ಗೆ ಕಳುಹಿಸಿದೆ. ಇದೀಗ ಈ ಟ್ರೋಫಿಯನ್ನು ದೇಶದಾದ್ಯಂತ ಕೊಂಡೊಯ್ಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ಧವಾಗಿದೆ. ಅಂದರೆ ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ನಡೆಸಲಾಗುತ್ತದೆ. ಇದಕ್ಕಾಗಿ ಪಾಕಿಸ್ತಾನ, ಯಾವ್ಯಾವ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ಏರ್ಪಡಿಸಬೇಕು ಎಂಬುದರ ಪಟ್ಟಿ ಮಾಡಿ, ಐಸಿಸಿಗೆ ಸಲ್ಲಿಸಿತ್ತು. ಆದರೆ ಪಾಕ್ ಸಲ್ಲಿಸಿದ ಪಟ್ಟಿಯಲ್ಲಿ ವಿವಾದಿತ ಜಾಗದ ಹೆಸರಿರುವುದನ್ನು ಮನಗಂಡಿರುವ ಐಸಿಸಿ, ಆ ಪ್ರದೇಶಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯದಂತೆ ಪಾಕ್ ಮಂಡಳಿಗೆ ತಾಕೀತು ಮಾಡಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿ ನವೆಂಬರ್ 14 ರಂದು ಇಸ್ಲಾಮಾಬಾದ್ ತಲುಪಿದೆ. ಈಗ ನವೆಂಬರ್ 16 ರಿಂದ ನವೆಂಬರ್ 24 ರವರೆಗೆ ಅಭಿಮಾನಿಗಳ ನಡುವೆ ಪಾಕಿಸ್ತಾನದ ವಿವಿಧ ಸ್ಥಳಗಳಿಗೆ ಟ್ರೋಫಿಯನ್ನು ಪ್ರದರ್ಶನವನ್ನು ನಡೆಸಲಾಗುತ್ತದೆ. ವೇಳಾಪಟ್ಟಿಯ ಪ್ರಕಾರ, ಟ್ರೋಫಿಯು ಸ್ಕರ್ಡು, ಮುರ್ರೆ, ಹುಂಜಾ ಮತ್ತು ಮುಜಫರಾಬಾದ್‌ನಲ್ಲಿ ಪ್ರದರ್ಶನಗೊಳಲ್ಲಿದೆ. ಇವುಗಳಲ್ಲಿ ಸ್ಕರ್ದು, ಹುಂಜಾ ಮತ್ತು ಮುಜಫರಾಬಾದ್ ನಗರಗಳು ವಿವಾದಿತ ಪ್ರದೇಶವಾದ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ದಲ್ಲಿ ಬರುತ್ತವೆ. ಹೀಗಾಗಿ ಈ ಪ್ರದೇಶಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯವಂತಿಲ್ಲ ಎಂದು ಪಾಕ್ ಮಂಡಳಿಗೆ ಐಸಿಸಿ ಸೂಚಿಸಿದೆ ಎಂದು ವರದಿಯಾಗಿದೆ.