ಪ್ರವೀಣ್ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರಿಗೆ ಧಿಕ್ಕಾರದ ಸ್ವಾಗತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಪ್ರವೀಣ್ ನೆಟ್ಟಾರು ಮನೆಗೆ ಭಾನುವಾರ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಬಿ. ರಮಾನಾಥ ರೈ ಮತ್ತಿತರರು ಭೇಟಿ ನೀಡಿದ ಸಂದರ್ಭದಲ್ಲಿ ಹಲವರು ಅವರನ್ನು ತರಾಟೆಗೆ ತೆಗೆದುಕೊಂಡು ಕಾಂಗ್ರೇಸ್ ಪಕ್ಷಕ್ಕೆ ಧಿಕ್ಕಾರ ಕೂಗಿದ ಘಟನೆ ನಡೆಯಿತು.

ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಹರೀಶ್‌ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಶಶಿಧರ ಹೆಗ್ಡೆ, ರಕ್ಷಿತ್, ಅಭಯಚಂದ್ರ ಜೈನ್, ಕಾವು ಹೇಮನಾಥ ಶೆಟ್ಟಿಎಂ. ಪ್ರತಿಭಾ ಕುಳಾಯಿ, ರಕ್ಷಿತ್ ಶಿವರಾಮ್, ಕವಿತಾ ಸನಿಲ್, ಎಂ.ವೆಂಕಪ್ಪ ಗೌಡ, ಪಿ.ಸಿ.ಜಯರಾಮ್, ಭರತ್ ಮುಂಡೋಡಿ, ಡಾ.ರಘು, ಪಿ.ಎಸ್.ಗಂಗಾಧರ್, ಸಚಿನ್‌ರಾಜ್ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ ಮೊದಲಾದವರು ಜತೆಯಾಗಿ ಪ್ರವೀಣ್ ಮನೆಗೆ ಭೇಟಿ ನೀಡಿದಾಗ ಈ ಘಟನೆ ನಡೆಯಿತು.

ಅವರೆಲ್ಲ ಒಳ ಪ್ರವೇಶಿಸಿ ಪ್ರವೀಣ್ ತಂದೆ ತಾಯಿ, ಪತ್ನಿ ನೂತನರಿಗೆ ಸಾಂತ್ವನ ಹೇಳಿದಾಗ ಪ್ರವೀಣ್ ಸಂಬಂಧಿಕರೊಬ್ಬರು ರಮಾನಾಥ ರೈಯವರನ್ನು ಉದ್ದೇಶಿಸಿ ಇಷ್ಟು ದಿನ ಕಳೆದ ಮೇಲೆ ಯಾಕೆ ಬಂದಿದ್ದೀರಿ? ನೀವು ಇದೇ ಜಿಲ್ಲೆಯವರಲ್ಲವೇ? ಎಂದು ಪ್ರಶ್ನಿಸಿದರು.

ಆಗ ರೈಯವರು ಮಾತನಾಡಲು ಪ್ರಯತ್ನಿಸುತ್ತಿದ್ದಂತೆ ಇಷ್ಟು ದಿನ ಕಳೆದ ಮೇಲೆ ಬಂದು ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಹೇಳುತ್ತಾ ಹೊರಗೆ ಬಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದು ಕೊಳ್ಳತೊಡಗಿದರು. ಆರೋಪಿಗಳು ಬಂಧನವಾದರೆ ನಾಳೆ ಜಾಮೀನು ಕೊಡಿಸುವವರು ನೀವೇ ಅಲ್ಲವೇ ಎಂದು ಕೆಲವರು ಹೇಳತೊಡಗಿದರು. ಬಳಿಕ ಬಿ.ಕೆ.ಹರಿಪ್ರಸಾದ್ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿ ರಾಜ್ಯ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದೂ ಅವರ ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ಕೊಡಲು ಸಾಧ್ಯವಾಗದೇ ಇರುವುದು ಶೋಚನೀಯ ಎಂದರು.

ಈ ಸಂದರ್ಭದಲ್ಲಿ ಕೆಲವರು ಕಾಂಗ್ರೆಸ್‌ಗೆ ಧಿಕ್ಕಾರ ಎಂದು ಘೋಷಣೆ ಕೂಗತೊಡಗಿದರು. ಬಳಿಕ ಕಾಂಗ್ರೆಸ್ ನಾಯಕರು ಸ್ಥಳದಿಂದ ನಿರ್ಗಮಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!