ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಕೊಡಗಿನಲ್ಲಿ ಮುಂದುವರಿದ ಪ್ರತಿಭಟನೆ

ಹೊಸ ದಿಗಂತ ವರದಿ, ಮಡಿಕೇರಿ:

ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಕೊಡಗಿನಲ್ಲಿ ಪ್ರತಿಭಟನೆಗಳು ಮುಂದುವರಿದಿದೆ.
ಶನಿವಾರಸಂತೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್’ನ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಸುಂಟಿಕೊಪ್ಪದಲ್ಲಿ ಬಿಲ್ಲವ ಸಂಘದ ವತಿಯಿಂದ ಶ್ರದ್ದಾಂಜಲಿ ಹಾಗೂ ಪ್ರತಿಭಟನೆ ನಡೆಯಿತು.
ಶನಿವಾರಸಂತೆಯಲ್ಲಿ ಅಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಶನಿವಾರಸಂತೆಯ ನಾಡಕಚೇರಿವರೆಗೆ ಮೆರವಣಿಗೆ ಸಾಗಿದರು. ಮೆರವಣಿಗೆಯುದ್ದಕ್ಕೂ ಹತ್ಯೆ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಪ್ರತಿಭಟನಾ ಮೆರವಣಿಗೆಗೂ ಮುನ್ನ ಕಾರ್ಯಕರ್ತರು ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರವೀಣ್ ನೆಟ್ಟಾರು ಭಾವಚಿತ್ರವಿರಿಸಿ, ಒಂದು ನಿಮಿಷ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಮಾನವ ಸರಪಳಿ ನಿರ್ಮಿಸಿ ಅರ್ಧಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.
ನಾಡಕಚೇರಿವರೆಗೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಭಜರಂಗದಳದ ಜಿಲ್ಲಾ ಸಂಚಾಲಕ ಅನೀಶ್, ರಾಜ್ಯದಲ್ಲಿ ಬಾಂಗ್ಲಾ ಮತ್ತು ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರು ತುಂಬಿದ್ದಾರೆ. ಇವರು ಹಿಂದೂ ಧರ್ಮದ ಕಾರ್ಯಕರ್ತರನ್ನು ಹತ್ಯೆ ಮಾಡುವುದಕ್ಕೆ ಸ್ಕೆಚ್ ಹಾಕುತ್ತಿದ್ದಾರೆ. ನೋಡುವುದಕ್ಕೆ ಚಿಕ್ಕ ಹುಡುಗರಂತೆ ಕಂಡರೂ ನಾವು ಅವರನ್ನು ಕಡೆಗಣಿಸುವಂತಿಲ್ಲ. ಒಂದು ವೇಳೆ ಅನುಮಾನಾಸ್ಪದ ಇಂತಹ ವ್ಯಕ್ತಿಗಳು ಓಡಾಡುತ್ತಿದ್ದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಗೃಹ ಸಚಿವರು ಮೌನವಾಗಿದ್ದಾರೆ

ವಿಶ್ವ ಹಿಂದೂ ಪರಿಷದ್ ತಾಲೂಕು ಸಂಚಾಲಕ ಜೀವನ್ ನೇಗಳ್ಳಿ ಮಾತನಾಡಿ, ಪ್ರಾಮಾಣಿಕ ಹಿಂದೂ ಕಾರ್ಯಕರ್ತನಾಗಿದ್ದ ಪ್ರವೀಣ್ ಹತ್ಯೆಯಾಗಿದ್ದರೂ ಮುಖ್ಯಮಂತ್ರಿಗಳು, ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾ ಮೌನವಾಗಿದ್ದಾರೆ. ಹಿಂದೆ ಹರ್ಷನ ಹತ್ಯೆ ಮಾಡಿದ ದುಷ್ಟರು ಇಂದು ಜೈಲಿನಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಹೈಫೈ ಜೀವನ ಮಾಡುತ್ತಿದ್ದಾರೆ. ಹೀಗೆ ಮಾಡುವುದಕ್ಕಾ ಅವರನ್ನು ಬಂಧಿಸಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ತೇಜಸ್ವಿ ಸೂರ್ಯ ಅವರು ಎಲ್ಲಾ ಮನೆಗಳನ್ನು ಕಾಯಲು ಸಾಧ್ಯವಿದೆಯೇ ಎಂದು ಹಗುರವಾಗಿ ಮಾತನಾಡಿದ್ದಾರೆ. ನೀವು ಎಲ್ಲರ ಮನೆಗಳನ್ನು ಕಾಯುವುದು ಬೇಡ, ಆದರೆ ಹಿಂದೂ ಕಾರ್ಯಕರ್ತರು ಮನಸ್ಸು ಮಾಡಿದರೆ ಎಲ್ಲರ ಮನೆಗಳನ್ನು ನಾವು ಕಾಯುತ್ತೇವೆ. ಆದರೆ ಕಾನೂನಿಗೆ ಗೌರವಕೊಟ್ಟು ಇದುವರೆಗೆ ಸುಮ್ಮನಿದ್ದೇವೆ ಎಂದು ನೇಗಳ್ಳೆ ಜೀವನ್ ಗುಡುಗಿದರು.
ಜೈಲಿನಲ್ಲಿ ರಾಜಾತಿಥ್ಯ: ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹತ್ಯೆಯಾಗುತ್ತಿರುವುದು ದುರಂತ. ತಪ್ಪು ಮಾಡಿದವರಿಗೆ ಗಲ್ಲು ಶಿಕ್ಷೆಯಾಗಲಿ. ಕೇವಲ ಬಂಧಿಸಿ, ಕೆಲವು ದಿನಗಳ ಕಾಲ ಜೈಲಿನಲ್ಲಿ ಇರಿಸಿ ರಾಜಾತಿಥ್ಯ ನೀಡಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಡಿ ಎಂದು ಬಿಜೆಪಿ ಪ್ರಮುಖ್ ಎಸ್.ಎನ್.ರಘು ನುಡಿದರು.

 ಸುಂಟಿಕೊಪ್ಪದಲ್ಲಿ
ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಶ್ರೀ ನಾರಾಯಣ ಗುರು ಬಿಲ್ಲವ ಸಂಘ ಸಮಾಜ ಮತ್ತು ದೇಯಿಬೈದೇದಿ ಸಂಘದ ಸದಸ್ಯರು ಮಾನವ ಸರಪಳಿ ರಚಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಿಲ್ಲವ ಸಮಾಜದ ಪ್ರಮುಖರಾದ ದಿನೇಶ್, ಸತ್ಯ ಕರ್ಕೇರ ಮತ್ತಿತರರು ಸರಕಾರ, ಜನಪ್ರತಿನಿಧಿಗಳು, ಸಚಿವರು, ಪಕ್ಷದ ನಾಯಕರೆನಿಕೊಂಡವರ ವಿರುದ್ಧ ಕಟುವಾದ ಭಾಷೆಯಲ್ಲಿ ಧಿಕ್ಕಾರ ಕೂಗಿದರು. ಇದೇ ಸಂದರ್ಭದಲ್ಲಿ ದಿವಂಗತ ಪ್ರವೀಣ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಗೌರವ ಸರ್ಮಪಿಸಲಾಯಿತು.
ಬಳಿಕ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಸುಂಟಿಕೊಪ್ಪ ಆರಕ್ಷಕ ಉಪನಿರೀಕ್ಷಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಮಣಿ ಮುಖೇಶ್, ಕಾರ್ಯದರ್ಶಿ ವೆಂಕಪ್ಪ ದೇಯಿಬೈದೇದಿ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ಕಾರ್ಯದರ್ಶಿ ಮಹಿಮಾ ಸತ್ಯ, ಬಿಲ್ಲವ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಪ್ರೀತಮ್, ಕಾರ್ಯದರ್ಶಿ ಯಕ್ಷಿತ್, ಸೋಮವಾರಪೇಟೆ ಬಿಲ್ಲವ ಸಂಘದ ರಮೇಶ್ ಕರಾವಳಿ, ಪ್ರಶಾಂತ್, ಹರೀಶ್ ಕೋಟ್ಯಾನ್, ಇಂದಿರಾ ಮೊಣ್ಣಪ್ಪ, ಇಂದಿರಾ ರಮೇಶ್, ಕುಶಾಲನಗರ ಬಿಲ್ಲವ ಸಮಾಜದ ಮಂಜು, ಸುಂಟಿಕೊಪ್ಪ ಬಿಲ್ಲವ ಸಂಘದ ಡಾ.ಯಶೋಧರ ಪೂಜಾರಿ, ಬಿ.ಕೆ. ಮೋಹನ್, ನಾಗೇಶ್, ಪೂಜಾರಿ, ಬಾಬು ಪೂಜಾರಿ, ಬಿ.ಎಸ್.ರಮೇಶ್ ಪೂಜಾರಿ, ದೇವಪ್ಪ, ದಿನೇಶ್ ತೊಂಡೂರು, ಪದ್ಮನಾಭ ಸೇರಿದಂತೆ ಉಭಯ ಸಂಘಟನೆಗಳ ನೂರಾರು ಪದಾಧಿಕಾರಿಗಳು ಪ್ರತಿಭಟನೆಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!