ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮೊದಲು ಶಿಷ್ಟಚಾರ ಕಲಿಯಲಿ: ಬಿಜೆಪಿ

ಹೊಸದಿಗಂತ ವರದಿ ಮಡಿಕೇರಿ:

ವೀರಾಜಪೇಟೆ ಕ್ಷೇತ್ರದ ಶಾಸಕ, ವಿಧಾನ ಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೊದಲು ಕಾಂಗ್ರೆಸ್ ನಾಯಕರು ಶಿಷ್ಟಾಚಾರ ಕಲಿಯಲಿ ಎಂದು ಕೊಡಗು ಜಿಲ್ಲಾ ಬಿಜೆಪಿ ಸಲಹೆ ಮಾಡಿದೆ. ಬೋಪಯ್ಯ ಅವರ ವಿರುದ್ಧ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಅವರು ನೀಡಿರುವ ಹೇಳಿಕೆಗೆ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಅವರು ತಿರುಗೇಟು ನೀಡಿದ್ದಾರೆ.
ಶಾಸಕ ಕೆ.ಜಿ.ಬೋಪಯ್ಯ ಭ್ರಷ್ಟಾಚಾರದಲ್ಲಿ ತೊಡಗಿದ್ದು, ತಮ್ಮ ಕರ್ತವ್ಯ ಮರೆತು ಕಾರ್ಯ ನಿರ್ವಹಿಸುತ್ತಿರುವುದಾಗಿ ಆರೋಪಿಸಿರುವ ಕಾಂಗ್ರೆಸ್ ‘ಕೈಲಾಗದ ಶತ್ರುವಿನ ಕೊನೆಯ ಅಸ್ತ್ರವೇ ಅಪಪ್ರಚಾರ’ ಎಂಬತೆ ವರ್ತಿಸುತ್ತಿದೆ. ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ಶಾಸಕರ ಭ್ರಷ್ಟಾಚಾರದ ಸಾಕ್ಷಿಗಳಿದ್ದರೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಏಜೆಂಟರಾಗಿರುವ ಗುತ್ತಿಗೆದಾರರೊಬ್ಬರು ಕಾಂಗ್ರೆಸ್ ನಾಯಕರಿಂದ ಹಣ ಪಡೆದು ಪ್ರತಿ ಚುನಾವಣೆ ಸಂದರ್ಭದಲ್ಲೂ ವೀರಾಜಪೇಟೆ ಶಾಸಕರ ವಿರುದ್ಧ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೆಸರು ಕೆಡಿಸಲು ಪ್ರಯತ್ನಿಸಿರುವುದು ಇಂದು ನಿನ್ನೆಯ ಪ್ರವೃತ್ತಿಯಲ್ಲ. ಪ್ರತಿ ಚುನಾವಣೆಗೆ ಒಂದು ಅಥವಾ ಎರಡು ವರ್ಷಗಳಿರುವಾಗ ಮಳೆಗಾಲದ ಅಣಬೆಗಳಂತೆ ಹೊರ ಬರುವ ಈ ನಕಲಿ ಗುತ್ತಿಗೆದಾರ (ಗುತ್ತಿಗೆ ಕೆಲಸ ಬಿಟ್ಟು ಅದೆಷ್ಟೋ ವರ್ಷ ಆಗಿದೆ) ಒಂದೋ ನಕಲಿ ಪರಿಸರವಾದಿಗಳೊಂದಿಗೆ ಅಥವಾ ಜಾತಿವಾದಿಗಳೊಂದಿಗೆ ಸೇರಿಕೊಂಡು ಬೋಪಯ್ಯ ಅವರ ಚಾರಿತ್ರ್ಯಹರಣಕ್ಕೆ ಪ್ರಯತ್ನಿಸಿರುವುದು ಕೊಡಗಿನ ಜನತೆ ಮರೆತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿರುವ ಮಹೇಶ್ ಜೈನಿ ಇಂತಹವರ ಬಂಡವಾಳ ಅನೇಕ ಕಡೆಗಳಲ್ಲಿ ಸಾಕ್ಷಿ ಸಮೇತ ಬಯಲಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಆರೋಪಿಸಿರುವಂತೆ ಮುಂದೆ ಬರಲಿರುವ ಚುನಾವಣೆ ಖರ್ಚಿಗಾಗಿ ಕೊಡಗಿನ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಹೇಳಿಕೆಗೆ ಉತ್ತರ ನೀಡಿರುವ ಜೈನಿ, ಹಣ ಕೊಟ್ಟು ಚುನಾವಣೆ ಗೆಲ್ಲುವ ಕಾಂಗ್ರೆಸ್‌ನ ಹಳೆ ಚಾಳಿಗೆ ದೇಶದ ಪ್ರಜ್ಞಾವಂತ ಮತದಾರರು ಈಗಾಗಲೇ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಯಾವಾಗಲೂ ತಾನು ಮಾಡಿದ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತದೆ ಎಂದು ಜೈನಿ ತಿರುಗೇಟು ನೀಡಿದ್ದಾರೆ. ಶಾಸಕರ ರಾಜಿನಾಮೆ ಕೇಳುವ ಕಾಂಗ್ರೆಸ್ಸಿಗರು ಭ್ರಷ್ಟಾಚಾರದ ಆರೋಪ ಹೊತ್ತಿರುವ ತಮ್ಮ ರಾಜ್ಯಾಧ್ಯಕ್ಷರ ರಾಜೀನಾಮೆ ಕೇಳಲಿ ಎಂದು ಸವಾಲು ಎಸೆದಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ವಕ್ತಾರರೇ ತಮ್ಮ ಊರಿನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಸರ್ಕಾರ ನೀಡಿದ್ದ ಸವಲತ್ತಿನ ತೆರದ ಬಾವಿ ಮತ್ತು ಕೊಳವೆ ಬಾವಿಗಳನ್ನು ಹೊಸ ಮನೆಗೊಂದು, ಹಳೆ ಮನೆಗೊಂದು ಎಂಬಂತೆ ಯಾರ ಮನೆ ಪಾಲಾಗಿದೆ ತಿಳಿಸುವಿರಾ? ನಿಮ್ಮ ಸರ್ಕಾರದ ಅವಧಿಯ ಸಾರ್ವಜನಿಕರಿಗೆ ಉಪಯೋಗಕ್ಕಿದ್ದ ತಡೆಗೋಡೆ ಯಾರ ಪಾಲಾಗಿದೆ. ನಿಮ್ಮ ಊರಿನ ಶಾಲೆಯ ಆಟದ ಮೈದಾನದ ವಿಸ್ತರಣೆ ಸಂದರ್ಭ ಎಷ್ಟೋ ಲೋಡುಗಟ್ಟಲೆ ಮಣ್ಣು ಯಾರ ಮನೆಯ ಉಪಯೋಗಕ್ಕೆ ಬಂದಿದೆ? ಸಾರ್ವಜನಿಕ ಉಪಯೋಗಕ್ಕಿದ್ದ ಕೊಳವೆ ಬಾವಿಗೆ ಅಳವಡಿಸಿದ್ದ ಮೋಟಾರ್ ಈಗ ಯಾರ ಮನೆಯ ಉಪಯೋಗಕ್ಕೆ ಬರುತ್ತಿದೆ ಎಂದು ಉತ್ತರಿಸುವಿರಾ ಎಂದು ಪ್ರಶ್ನಿಸಿರುವ ಮಹೇಶ್ ಜೈನಿ, ಇದೆಲ್ಲದಕ್ಕೂ ನಮ್ಮ ಬಳಿ ಸಾಕ್ಷಿಗಳಿದ್ದು, ಈಗ ಯಾರು ಭ್ರಷ್ಟಾಚಾರಿ ಎಂಬುದನ್ನು ತಿಳಿಸಿ ಎಂದು ಟೀಕೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!