ಹೊಸದಿಗಂತ ವರದಿ, ದಾವಣಗೆರೆ:
ತಮ್ಮ ಮೇಲಿನ ಮೂಡಾ ಆರೋಪ ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ರಾಜ್ಯದ ಜನತೆಗೆ ದಂಗೆ ಏಳುವಂತೆ ಪ್ರಚೋದನೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಎಷ್ಟು ಸಲ ದೆಹಲಿಗೆ ಹೋಗಿದ್ದಾರೆ, ಎಷ್ಟು ಸಲ ಪ್ರಧಾನಿ, ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದಾರೆ? ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ನಗರದ ತ್ರಿಶೂಲ್ ಕಲಾ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಮಾತ್ರ ದೆಹಲಿಗೆ ಸಿದ್ದರಾಮಯ್ಯ ಹೋಗುತ್ತಾರೆ. ರಾಜಕೀಯವಾಗಿ ತಾವೇ ಬಲಿಪಶು ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡುತ್ತಾರೆ. ಅದೇ ಎಳಸು ರಾಹುಲ್ ಗಾಂಧಿ ಪಪ್ಪುವನ್ನು ಭೇಟಿ ಮಾಡುವ ಸಿದ್ದರಾಮಯ್ಯ ಪ್ರಧಾನಿ, ಕೇಂದ್ರ ಹಣಕಾಸು ಸಚಿವರನ್ನೇ ಭೇಟಿ ಮಾಡುವುದಿಲ್ಲ. ಈಗ ಕೇಂದ್ರದ ಮಲತಾಯಿ ಧೋರಣೆ ಎನ್ನುತ್ತಾರೆ ಎಂದು ಟೀಕಿಸಿದರು.
ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಲ್ಲಿ ಸಿಎಂ ಆಗಬೇಕಾಗಿತ್ತು, ದೇಶದ ಪ್ರಧಾನಿಯೂ ಆಗಬೇಕಾಗಿತ್ತು. ಆದರೆ ಕಳೆದ ಲೋಕಸಭೆ ಚುನಾವಣೆ ಪೂರ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಕಾಂಗ್ರೆಸ್ ಪಕ್ಷವು ಪ್ರಧಾನಿ ಅಭ್ಯರ್ಥಿಯೆಂದು ಘೋಷಣೆ ಮಾಡಲಿಲ್ಲ. ಕಾಂಗ್ರೆಸ್ ಪಕ್ಷ ಒಂದು ರೀತಿ ತಿರಸ್ಕೃತ ನಾಣ್ಯವಾಗಿದೆ. ರಾಜ್ಯ, ರಾಷ್ಟ್ರದಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ ಏನಾಗಿದೆ ಅಂತಾ ಯಾರಾದರೂ ಗ್ರಹಿಸಬಹುದು ಎಂದು ಅವರು ಹೇಳಿದರು.
ಕಾಂಗ್ರೆಸ್ಸಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಬಗ್ಗೆ ನೀಡಿರುವ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು. ಕಾಂಗ್ರೆಸ್ ಮತ ಬ್ಯಾಂಕ್ ಗಾಗಿ ಅಲ್ಪಸಂಖ್ಯಾತ ಭಯೋತ್ಪಾದಕರನ್ನು ಓಲೈಸುತ್ತಿದೆ. ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸುಡಲು ಹೊರಟಿದ್ದ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ದುಷ್ಕರ್ಮಿಗಳ ಮೇಲಿನ ಕೇಸ್ ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದೊಂದು ರೀತಿ ಪಾಪರ್ ಹಾಗೂ ಭಯೋತ್ಪಾದಕರ ಸರ್ಕಾರವಾಗಿದೆ ಎಂದು ಅವರು ಕಿಡಿಕಾರಿದರು.
ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಹಾಗೂ ನನ್ನ ಮೇಲೆ ಇದ್ದ ಕೇಸ್ ಗಳನ್ನೂ ವಾಪಾಸ್ ಪಡೆದಿದ್ದಾರೆ. ಕೇಸ್ ವಾಪಾಸ್ಸು ಪಡೆಯುವಂತೆ ನಾವ್ಯಾರೂ ಅರ್ಜಿ ಹಾಕಿಲ್ಲ. ಹಿಂದೆ ಕಾಂಗ್ರೆಸ್ ನ ಸಮ್ಮಿಶ್ರ ಸರ್ಕಾರವಿದ್ದಾಗ ನನ್ನ ಮೇಲೆ ನೂರಾರು ಕೇಸ್ ದಾಖಲಿಸಿದ್ದರು. ಎಲ್ಲಾ ಕೇಸ್‌ಗಳು ಖುಲಾಸೆಯಾಗಿವೆ. ಇನ್ನೂ 2-3 ಕೇಸ್ ಬಾಕಿ ಇದ್ದು, ಅವುಗಳೂ ಖುಲಾಸೆಯಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಂಗನವಾಡಿ ಸಹಾಯಕಿಯೊಬ್ಬರು ದಾವಣಗೆರೆಯಲ್ಲಿ 3 ತಿಂಗಳಿಂದ ವೇತನ ಬಾರದೇ, ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ರಾಜ್ಯದಲ್ಲಿ ಪಾಪರ್ ಸರ್ಕಾರ ಇದೆ ಎಂಬುದಕ್ಕೆ ಇದಕ್ಕಿಂತ ತಾಜಾ ನಿದರ್ಶನ ಬೇಕಾ? ಆಶಾ, ಅಂಗನವಾಡಿ ನೌಕರರಿಗೆ ಸರಿಯಾಗಿ ವೇತನ ನೀಡಲೂ ಹಣ ಇಲ್ಲದ ಸರ್ಕಾರ ಇದಾಗಿದೆ. ಈಗಷ್ಟೆ ದಸರಾ ಹಬ್ಬ ಮುಗಿದಿದ್ದು, ಶೀಘ್ರವೇ ರಾಜ್ಯದ ಕಾಂಗ್ರೆಸ್ ಸರ್ಕಾರವೂ ಪತನವಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ಇಟ್ಟುಕೊಂಡು, ಲಾಭ ಮಾಡಿಕೊಳ್ಳಲು ರಾಜಕೀಯಕ್ಕೆ ಬಂದವನು ನಾನಲ್ಲ. ಬಿಎಸ್‌ವೈ ಹಾಗೂ ನನ್ನದು ಅಪ್ಪ-ಮಕ್ಕಳ ಸಂಬಂಧವಾಗಿದೆ. ನಾನು ಕಮರ್ಷಿಯಲ್ ರಾಜಕಾರಣಿಯೂ ಅಲ್ಲ. ನಮ್ಮ ವಿರುದ್ಧ ಹೇಳಿಕೆ ನೀಡಿದವರು ಕಮರ್ಷಿಯಲ್ ನಾಯಕರು. ಯಾರು ಏನು ಬೇಕಾದರೂ ಹೇಳಿಕೆ ನೀಡಲಿ. ಯಡಿಯೂರಪ್ಪನವರ ಪರವಾಗಿ ಗಟ್ಟಿಯಾಗಿ ನಿಂತವನು ನಾನು. ದಾವಣಗೆರೆಯಲ್ಲಿ ನನಗೆ ಯಾವುದೇ ಗೆಸ್ಟ್ ಹೌಸ್ ಗೊತ್ತಿಲ್ಲ. ನನಗೆ ಗೊತ್ತಿರುವುದು ಬಿಜೆಪಿ ಜಿಲ್ಲಾ ಕಚೇರಿ ಮಾತ್ರ. ನಾವು ಬಿಜೆಪಿ, ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಪರವಾಗಿದ್ದೇವೆ. ರಾಜ್ಯಾಧ್ಯಕ್ಷರ ವಿರುದ್ಧ ಇಲ್ಲಿ ೩-೪ ಜನರನ್ನು ಕರೆಸಿಕೊಂಡು, ಸಭೆ ಮಾಡಿದವರು ಭಿನ್ನಮತೀಯರು ಎಂದು ಅವರು ಇದೇ ವೇಳೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.