Tuesday, March 21, 2023

Latest Posts

ಕಾಂಗ್ರೆಸ್ ಪಕ್ಷದ 200 ಯೂನಿಟ್‌ ಉಚಿತ ವಿದ್ಯುತ್‌ ಘೋಷಣೆ ಹುಸಿ ಭರವಸೆ: ಸಿಎಂ ಬೊಮ್ಮಾಯಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪವರ್‌ ಜೊತೆ ʼಪವರ್‌ ಪಾಲಿಟಿಕ್ಸ್‌ʼ ಬಳಸದೆ ವಸ್ತವಾಂಶದ ಮೇಲೆ ನಿರ್ಣಯಗಳನ್ನು ಇಂಧನ ಇಲಾಖೆ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕು. ಜನರಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು ಎನ್ನುವ ಹುಸಿ ಭರವಸೆ ನೀಡಿ ಜನರನ್ನು ಮೋಸಗೊಳಿಸುವ ಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ಮಿಸಿರುವ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅವೈಜ್ಞಾನಿಕ ವಿದ್ಯುತ್‌ ನೀತಿಗಳಿಂದಾಗಿ ಈಗಾಗಲೇ ಇಂಧನ ಇಲಾಖೆ ನಷ್ಟದಲ್ಲಿದೆ. ಯಾರಿಗೋ ಲಾಭ ಮಾಡುವ ಉದ್ದೇಶದಿಂದ ವಿದ್ಯುತ್‌ ಇಲಾಖೆಯಲ್ಲಿ ರಾಜಕೀಯ ಪವರ್‌ ಬಳಸಿರುವುದನ್ನು ನಾವು ನೋಡಿದ್ದೇವೆ. ಇದರ ದುರುಪಯೋಗ ತಡೆಯಲು ನಮ್ಮ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

‘ಈಗಾಗಲೇ ನಾವು ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಲ್ಲಿ 40 ಯೂನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುತಿದ್ದೇವೆ. ಗೃಹ ಬಳಕೆಯ ವಿದ್ಯುತ್‌ ಪ್ರಮಾಣ 50 ರಿಂದ 70 ಯೂನಿಟ್‌ ಮಾತ್ರ ಇರುತ್ತದೆ. ಇದರಲ್ಲಿ ಬಹುತೇಕ ಉಚಿತ ವಿದ್ಯುತ್‌ ನ್ನು ನಾವು ಈಗಾಗಲೇ ನೀಡುತ್ತಿದ್ದೇವೆ. 200 ಅಥವಾ 300 ಯೂನಿಟ್‌ ವಿದ್ಯುತ್‌ ಎಲ್ಲಿಯೂ ಬಳಕೆ ಆಗಲ್ಲ. ನಾವು 200 ಯೂನಿಟ್‌ ಉಚಿತ ನೀಡುತ್ತೇವೆ ಎನ್ನುವುದೇ ದೊಡ್ಡ ಮೋಸ ಎಂದು ಮುಖ್ಯಮಂತ್ರಿ ವಿವರಿಸಿದರು.

‘ಪವರ್‌ ಜೊತೆಗೆ ಪವರ್‌ ಪಾಲಿಟಿಕ್ಸ್‌ ಬಳಸಬಾರದು. ವಾಸ್ತವ ಅಂಶದ ಮೇಲೆ ಮತ್ತು ಇಲಾಖೆಯ ದಕ್ಷತೆಯ ಹಿತದೃಷ್ಟಿಯಿಂದ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಸರಕಾರ ಸುಮಾರು 16000 ಕೋಟಿ ರೂ. ಸಬ್ಸಿಡಿಯನ್ನು ನೀಡುತ್ತಿದೆ. ಆದಾಗ್ಯೂ ಕೂಡ ಎಸ್ಕಾಂಗಳು ಸಾಲದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾದ ಪರಿಸ್ಥಿತಿ ಉದ್ಬವಿಸಿದೆ. ಕೆಲವು ಗ್ರಾಹಕರಿಂದ ವಿದ್ಯುತ್‌ ಸರಬರಾಜು ಶುಲ್ಕದ ಬಾಕಿ ಪಾವತಿ ಆಗದ ಕಾರಣದಿಂದಾಗಿ ಉತ್ಪಾದನೆ ಮತ್ತು ಆದಾಯದಲ್ಲಿ ಅಂತರ ಉಂಟಾಗಿದೆ. ಇದನ್ನು ಸರಿದೂಗಿಸಲು ರಾಜ್ಯ ಸರಕಾರ 9000 ಕೋಟಿ ರೂ. ವಿಶೇಷ ಅನುದಾನವನ್ನು ಇಂಧನ ಇಲಾಖೆಗೆ ನೀಡಲಾಗಿದೆ ಎಂದು ತಿಳಿಸಿದರು.

9000 ಸಾವಿರ ಕೋಟಿ ಜೊತೆಗೆ ಇನ್ನಷ್ಟು ಹಣವನ್ನು ನಮ್ಮ ಸರಕಾರ ಇಂಧನ ಇಲಾಖೆಗೆ ನೀಡಲಿದೆ ಎಂದು ಭರವಸೆ ನೀಡಿದರು.

ಗುರುಚರಣ್‌ ಸಮಿತಿ ಶಿಫಾರಸು ಅನುಷ್ಠಾನ
ವಿದ್ಯುತ್‌ ಉತ್ಪಾದನೆ, ವಿತರಣೆ ಮತ್ತು ಪೂರೈಕೆಯಲ್ಲಿ ನಷ್ಟ ಉಂಟಾಗುತ್ತಿದೆ. ಈ ಮೂರು ವಲಯದಲ್ಲಿ ನಾವು ದಕ್ಷತೆ ತಂದು ನಷ್ಟವನ್ನು ಕಡಿಮೆ ಮಾಡಬೇಕಾಗಿದೆ. ಹಲವಾರು ಸುಧಾರಣೆಗಳನ್ನು ಇಲಾಖೆಯಲ್ಲಿ ತರಲು ಗುರುಚರಣ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರಲು ಕ್ರಮವಹಿಸಲಾಗಿದೆ ಎಂದರು.

ಇದರ ಜೊತೆಗೆ ನವೀಕರಿಸಬಹುದಾದ ಇಂಧನವನ್ನು ಬಳಕೆ ಮಾಡಿ, ನಮ್ಮ ಪಂಪ್‌ ಸ್ಟೊರೇಜ್‌ ವ್ಯವಸ್ಥೆಗೆ ನಾವು ಕೈಹಾಕಿದ್ದೇವೆ. ಶರಾವತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ನಾವು ಮುಂದಾಗಿದ್ದು, ನವೀಕರಿಸಬಹುದಾದ ಇಂಧನವನ್ನು ಬಳಸಲು ಪಂಪ್‌ ಸ್ಟೊರೇಜ್‌ ಅವಶ್ಯಕತೆ ಇದೆ. ಅದನ್ನು ನಾವು ಮಾಡುತ್ತೇವೆ. ಸ್ಟೊರೇಜ್‌ ಗೆ ಸೋಲಾರ್‌ ಬ್ಯಾಟರಿ ಬೇಕಾಗಿದ್ದು, ಇದನ್ನು ಪೂರೈಸಲು ಸರಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ  ತಿಳಿಸಿದರು.
ಇಂಧನ ಸಚಿವ ಸುನಿಲ್ ಕುಮಾರ್ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!