ಶೆಟ್ಟರ್-ಸವದಿ ಸೇರ್ಪಡೆಯಿಂದ ಕಾಂಗ್ರೆಸ್ ಅಧಿಕಾರದತ್ತ: ಡಿಕೆಶಿ

ಹೊಸದಿಗಂತ ವರದಿ, ಮಡಿಕೇರಿ:

ರಾಜ್ಯದಲ್ಲಿ ಬದಲಾವಣೆಯ ಗಾಳಿ ಶುರುವಾಗಿದ್ದು, ಬಿಜೆಪಿಯ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರಿದ್ದಾರೆ. ಇದು ನಮ್ಮನ್ನು ಅಧಿಕಾರದತ್ತ ಕೊಂಡೊಯ್ಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇನ್ನೂ ಹಲವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದರಲ್ಲದೆ, ಕೊಡಗು ಜಿಲ್ಲೆಯಲ್ಲಿ ಕಳೆದ 25 ವರ್ಷಗಳ ಆಡಳಿತವನ್ನು ಬದಲಾವಣೆ ಮಾಡಬೇಕೆಂದು ಜನ ಬಯಸಿದ್ದಾರೆ ಎಂದು ನುಡಿದರು.

ರಾಜ್ಯದಲ್ಲಿ ಬಿಜೆಪಿಗೆ ಬುನಾದಿ ಹಾಕಿಕೊಟ್ಟಿದ್ದ ಎ.ಕೆ. ಸುಬ್ಬಯ್ಯ ಕೂಡಾ ಬಿಜೆಪಿ ಸೂಕ್ತ ಪಕ್ಷವಲ್ಲ ಎಂದು ಕಾಂಗ್ರೆಸ್ ಸೇರಿದ್ದರು. ಅವರ ಪುತ್ರನಿಗೆ ಈ ಬಾರಿ ವೀರಾಜಪೇಟೆ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದೇವೆ. ಮಡಿಕೇರಿಯಲ್ಲಿ ಈ ಊರಿನ ಅಳಿಯನಿಗೆ ನೀಡಿದ್ದೇವೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಇಲ್ಲಿನ ಜನರ ಮೇಲಿದೆ ಎಂದರು.

ಮಂಥರ್ ಇಲ್ಲಿನ ರಕ್ತ ಹಂಚಿಕೊಂಡು ಹುಟ್ಟಿದವರು. ಅವರು ವಿದ್ಯಾವಂತ, ಬುದ್ದಿವಂತರಿದ್ದಾರೆ. ಎಲ್ಲರೂ ಒಮ್ಮತದಿಂದ ತೀರ್ಮಾನ ಮಾಡಿ ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಮೇ 10 ಕೇವಲ ಮತದಾನದ ದಿನವಲ್ಲ. 40ಪರ್ಸೆಂಟ್ ಸರ್ಕಾರ ಎಂಬ ಆರೋಪ ಹೊತ್ತ ಸರ್ಕಾರವನ್ನು ತೊಲಗಿಸುವ ದಿನ. ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿರುವುದಕ್ಕೆ ಉತ್ತರ ಕೊಡುವ ದಿನ. ದೇವರು ನಮಗೆ ವರವನ್ನೂ ಕೊಡಲ್ಲ, ಶಾಪವನ್ನೂ ಕೊಡಲ್ಲ. ಅವಕಾಶವನ್ನು ಕೊಡುತ್ತಾನೆ. ಆ ಅವಕಾಶವನ್ನು ಮೇ 10ರಂದು ಸರಿಯಾಗಿ ಬಳಸಿಕೊಳ್ಳಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ ಎಂದು ಡಿಕೆಶಿ ನುಡಿದರು.

ನಾವು ಗ್ಯಾರಂಟಿ ಕಾರ್ಡ್‌’ನಲ್ಲಿ ಘೋಷಿಸಿದ್ದನ್ನು ಖಂಡಿತ ಜಾರಿಗೆ ತರುತ್ತೇವೆ. ಒಂದು ವೇಳೆ ಮಾತು ತಪ್ಪಿದರೆ ಮುಂದೆ ಯಾವತ್ತೂ ಮತ ಕೇಳಲು ಬರುವುದಿಲ್ಲ. ರಾಜ್ಯದಲ್ಲಿ 150 ಸೀಟ್ ಗೆದ್ದೇ ಗೆಲ್ಲುತ್ತೇವೆ. ಮಂಥರ್ ಮತ್ತು ಪೊನ್ನಣ್ಣ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ. ಯಾವ ಆರೋಪವೂ ಅವರಿಬ್ಬರ ಮೇಲೆ ಇಲ್ಲ. ಕೊಡಗಿನ ನಾಯಕರ ಒಗ್ಗಟ್ಟು ನಮ್ಮ ಗೆಲುವಿಗೆ ಬಲ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಡಾ.ಮಂಥರ್ ಗೌಡ, ವೀರಾಜಪೇಟೆ ಕ್ಷೇತ್ರದ ಎ.ಎಸ್. ಪೊನ್ನಣ್ಣ, ವಿಧಾನ‌ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸೇರಿದಂತೆ ಹಲವು ನಾಯಕರು ವೇದಿಕೆಯಲ್ಲಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!