ಹೊಸದಿಗಂತ ವರದಿ,ಕಲಬುರಗಿ:
ನಗರದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ಪಕ್ಷದ ಕಚೇರಿಗೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಮೂವತ್ತಕ್ಕೂ ಅಧಿಕ ಕಾಂಗ್ರೆಸ್ ಮುಖಂಡರನ್ನು ಪೋಲಿಸರು ಬಂಧಿಸಿ ಕರೆದೊಯ್ದಿರುವ ಘಟನೆ ನಗರದ ಎಸ್.ಟಿ.ಬಿ.ಟಿ.ಕ್ರಾಸ್ ಬಳಿ ನಡೆದಿದೆ.
ಕಾಂಗ್ರೆಸ್ ಭವನದಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ದಿಕ್ಕಾರ ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ದೇಶದಲ್ಲಿ ರಾಷ್ಟ್ರ ಧ್ವಜದ ಬದಲಾಗಿ, ಕೇಸರಿ ಭಗವಾಧ್ವಜವನ್ನು ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬಿಜೆಪಿ ಕಚೇರಿ ಎದುರಿಗೆ ಪ್ರತಿಭಟನೆಯ ನಿರ್ಣಯವನ್ನು ಹಾಕಿಕೊಂಡಿದ್ದರು.
ಈ ವೇಳೆ ಎಚ್ಚೆತ್ತು ಕೊಂಡ ಪೋಲಿಸರು ಪ್ರತಿಭಟನೆಯ ಮುನ್ನವೆ ಪೋಲಿಸರು ಸುಮಾರು ಮೂವತ್ತಕ್ಕೂ ಅಧಿಕ ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದು ಪೋಲಿಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಕಾಮಿ೯ಕ ಘಟಕದ ಅಧ್ಯಕ್ಷ ಪ್ರಕಾಶ್ ,ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಶಿವಾನಂದ ಹೊನಗುಂಟಿ ಸೇರಿದಂತೆ ಅನೇಕರು ಇದ್ದರು.