ಕಾಂಗ್ರೆಸ್- ಎಸ್‍ಡಿಪಿಐ ನಡುವಿನ ಹೊಂದಾಣಿಕೆಯ ಉನ್ನತ ಮಟ್ಟದ ತನಿಖೆಯಾಗಲಿ: ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಮತ್ತು ಎಸ್ ಡಿಪಿಐ ನಡುವಿನ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೆಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

ಬೆಂಗಳೂರು ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹೇಗೆ ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಹಿಂದೆ ಹೊಂದಾಣಿಕೆಯನ್ನು ಮಾಡಿಕೊಂಡಿದ್ದರು; ಕಾಂಗ್ರೆಸ್ ಮತ್ತು ಎಸ್ ಡಿಪಿಐ ಚುನಾವಣಾ ಹೊಂದಾಣಿಕೆ ಏನಿತ್ತು ಎಂಬುದು ಜನರಿಗೆ ತಿಳಿದಿದೆ ಎಂದರು.

ಪಿಎಫ್‍ಐ, ಕೆ ಎಫ್ ಡಿ ಮತ್ತು ಎಸ್‍ಡಿಪಿಐ ಕಾಂಗ್ರೆಸ್ಸಿನ ಇನ್ನೊಂದು ಮುಖ ಅನ್ನುವುದನ್ನು ನಾವು ಬಹಳ ವರ್ಷದಿಂದ ಹೇಳುತ್ತಲೇ ಬಂದಿದ್ದೇವೆ. ಇವು ಕರ್ನಾಟಕ ರಾಜ್ಯದಲ್ಲಿ ಮತ್ತು ದೇಶದ ಬೇರೆ ಬೇರೆ ಭಾಗದಲ್ಲಿ ದೇಶವಿರೋಧಿ ಮತ್ತು ಸಮಾಜ ವಿರೋಧಿ ಕೃತ್ಯಗಳನ್ನು ಮಾಡುತ್ತಿವೆ ಎಂಬುದನ್ನು ಹೇಳುತ್ತಲೇ ಬಂದಿದ್ದೇವೆ ಎಂದು ವಿವರಿಸಿದರು.

ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರ ಇದ್ದ ಸಂದರ್ಭ ಹಿಂದೂ ಯುವಕರ ಹತ್ಯೆಯಾಗಿತ್ತು. ಆ ಸಂದರ್ಭ ಕುಟುಂಬದವರಿಗೆ ಸಾಂತ್ವನ ಹೇಳುವ ಅಥವಾ ಸರಿಯಾಗಿ ತನಿಖೆ ನಡೆಸುವ ಕಡೆಗೆ ಸಿದ್ದರಾಮಯ್ಯನವರು ಗಮನ ಕೊಡಲಿಲ್ಲ. ಅದರ ಬದಲಾಗಿ ಅವರು ಆ ಸಮುದಾಯದ ಜನರನ್ನು ಓಲೈಕೆ ಮಾಡುತ್ತಾ ಹೋದರು ಎಂದು ಟೀಕಿಸಿದರು.

ಇದರ ಪರಿಣಾಮವಾಗಿಯೇ ಅವರ ಮಾನಸಿಕತೆ ಟಿಪ್ಪು ಜಯಂತಿ ಮೂಲಕ ಹೊರ ಬಂತು; ಟಿಪ್ಪು ಜಯಂತಿ ಕೇವಲ ಒಂದು ಜಯಂತಿ ಆಗಿರಲಿಲ್ಲ. ಟಿಪ್ಪು ಜಯಂತಿ ಹಿಂದೂಗಳ ವಿರುದ್ಧ ಮುಸಲ್ಮಾನರನ್ನು ಎತ್ತಿ ಕಟ್ಟುವ ಹುನ್ನಾರವಾಗಿತ್ತು. ಪರಸ್ಪರ ಜಗಳ ಮಾಡಿಸುವ ಹುನ್ನಾರ ಅದಾಗಿತ್ತು. ಈ ಜಗಳದ ಪರಿಣಾಮವಾಗಿ ಮಡಿಕೇರಿಯಲ್ಲಿ ಕುಟ್ಟಪ್ಪನವರ ಹತ್ಯೆಯಾಯಿತು. ಕುಟ್ಟಪ್ಪನವರ ಹತ್ಯೆ ಆದಾಗ ಸ್ವತಹ ನಾನು ಹೋಗಿದ್ದೆ. ಅವರ ತಲೆ ಮತ್ತು ಮೈತುಂಬ ಕಲ್ಲಿನಿಂದ ಹೊಡೆದ ಗಾಯಗಳಿದ್ದವು ಎಂದು ಗಮನ ಸೆಳೆದರು.

ಅದೇ ಕಾರಣಕ್ಕೆ ಅವರ ಸಾವು ಸಂಭವಿಸಿತ್ತು. ಕರ್ನಾಟಕ ಮತ್ತು ಇತರ ಕಡೆ ಟಿಪ್ಪು ಜಯಂತಿಯ ವಿರುದ್ಧ ನಡೆದ ಹೋರಾಟದಲ್ಲಿ ಇವತ್ತಿಗೆ ಕೂಡ ನಮ್ಮ ಕಾರ್ಯಕರ್ತರು ಕೇಸನ್ನು ಎದುರಿಸುತ್ತಿದ್ದಾರೆ ಎಂದರಲ್ಲದೆ, ಪಿ ಎಫ್ ಐ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಯನ್ನು ಮಾಡುತ್ತಿದೆ; ಭಯೋತ್ಪಾದಕತೆಗೆ ಫಂಡಿಂಗ್ ಮಾಡುತ್ತಿದೆ ಮತ್ತು ಹಲವಾರು ಹಿಂದೂ ಯುವಕರ ಹತ್ಯೆಗೆ ಕಾರಣವಾಗಿದೆ. ಅಲ್ಲದೆ ನೇತಾರರ ಹತ್ಯೆಗೆ ಕಾರಣವಾಗುವ ಸಂಚನ್ನು ಮಾಡುತ್ತಿದೆ ಎಂಬ ಕಾರಣಕ್ಕಾಗಿಯೇ ಆ ಸಾಕ್ಷಿಗಳ ಆಧಾರದಲ್ಲಿ ಪಿಎಫ್ ಐ ಬ್ಯಾನ್ ಆಗಿದೆ ಎಂದರು.

ಕೇಂದ್ರ ಸರ್ಕಾರ ನಿಷೇಧದ ಕುರಿತಂತೆ ಒಂದು ದಿಟ್ಟವಾದ ನಿರ್ಣಯ ತೆಗೆದುಕೊಂಡಿದೆ ಪತ್ರಕರ್ತರು ಪದೇ ಪದೇ ಪ್ರಶ್ನಿಸಿದಾಗ ಪೂರಕ ಸಾಕ್ಷ್ಯ ಇಲ್ಲದೆ ನಿಷೇಧ ಅಸಾಧ್ಯ ಎಂದು ಹೇಳುತ್ತಲೇ ಬಂದಿದ್ದೆ. ಕಾನೂನಿನ ಆಧಾರದಲ್ಲಿ ಸಂಘಟನೆಯನ್ನು ನಿಷೇಧಿಸಬೇಕು; ಇಲ್ಲದಿದ್ದಲ್ಲಿ ಅದು ಮಾನ್ಯವಾಗಲಾರದು ಎಂದು ತಿಳಿಸಿದ್ದೆ. ಅದೇ ರೀತಿ ಸಮಗ್ರ ಮಾಹಿತಿ ಸಂಗ್ರಹದ ಬಳಿಕ ಪಿ ಎಫ್ ಐ ನಿಷೇಧ ಸಾಧ್ಯವಾಯಿತು ಎಂದು ತಿಳಿಸಿದರು.

ಪಿಎಫ್ ಐ ಕಾರ್ಯಕರ್ತರು ಇವತ್ತು ಎಲ್ಲಿ ಹೋಗಿದ್ದಾರೆ ಎಂದ ಅವರು ಎಸ್ ಡಿ ಪಿ ಐ ಸೇರಿದ್ದಾರೆ ಎಂದು ತಿಳಿಸಿದರು. ಪಿ ಎಫ್ ಐ ಯ ರಾಜಕೀಯ ಮುಖವಾಡ ಮತ್ತು ರಾಜಕೀಯ ಮುಖವಾಣಿ ಎಸ್ ಡಿ ಪಿ ಐ. ಅದಕ್ಕೆ ಮೊದಲು ಅವರು ಕರ್ನಾಟಕದಲ್ಲಿ ಕೆಎಫ್‍ಡಿ ಹೆಸರಿನಲ್ಲಿ ಕೂಡ ಕೆಲಸವನ್ನು ಮಾಡುತ್ತಿದ್ದರು. ಹಲವಾರು ಜನರನ್ನು ಬಂಧಿಸಲಾಗಿತ್ತು. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಸುಮಾರು 116 ಕೇಸುಗಳಲ್ಲಿ ಸಿಕ್ಕಿ ಬಿದ್ದು ಅರೆಸ್ಟ್ ಆಗಿದ್ದ 1700 ಪಿ ಎಫ್ ಐ ಮತ್ತು ಎಫ್ ಡಿ ಎ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು ಎಂದು ಆರೋಪಿಸಿದರು.

ಅವರನ್ನು ಬಿಡುಗಡೆ ಮಾಡಿದ ಬಳಿಕ ವಾಪಸ್ ಸಮಾಜಕ್ಕೆ ಬಂದರು; ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದರು. ಕೆಜೆ ಹಳ್ಳಿ ಡಿಜೆ ಹಳ್ಳಿ, ಮಂಗಳೂರಿನ ಸ್ಟೇಷನ್ನಿಗೆ ನುಗ್ಗಿರುವುದು, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿರುವುದು -ಇವೆಲ್ಲವನ್ನು ಪಿಎಫ್ ಐ ಕಾರ್ಯಕರ್ತರೇ ಮಾಡಿದ್ದಾರೆ. ಪಿ ಎಫ್ ಐನ ಅದೇ ಕಾರ್ಯಕರ್ತರು ಇವತ್ತು ಎಸ್ ಡಿ ಪಿ ಐ ನಲ್ಲಿ ಇದ್ದಾರೆ. ಪಿ ಎಫ್ ಐ ಬ್ಯಾನ್ ಆದ ತಕ್ಷಣ ಅವರೆಲ್ಲರೂ ಎಸ್‍ಡಿಪಿಐ ಎಂಬ ರಾಜಕೀಯ ಪಕ್ಷವನ್ನು ಸೇರಿಕೊಂಡಿದ್ದಾರೆ ಎಂದು ವಿವರ ನೀಡಿದರು.

ಮಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆದಿದೆ. ಐಎಸ್‍ಐಎಸ್ ಒಂದು ತಂಡ ಅದನ್ನು ನಾವೇ ಮಾಡಿದ್ದು ಎಂದು ಹೇಳಿದ್ದಾರೆ. ಬಾಂಬ್ ಬ್ಲಾಸ್ಟ್ ಮಾಡಿದವನನ್ನು ನಿರಪರಾಧಿ ಎಂಬ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸಮರ್ಥನೆ ಮಾಡಿಕೊಂಡರು ಎಂದು ಟೀಕಿಸಿದರು.
ಅಂದರೆ ಕಾಂಗ್ರೆಸ್ಸಿನ ಉದ್ದೇಶ ಏನು? ಎಸ್ ಡಿ ಪಿ ಏ ಉದ್ದೇಶ ಏನು? ಎಂದು ಅವರು ಪ್ರಶ್ನಿಸಿದರು. ಯಾರು ದೇಶದ್ರೋಹಿ ಚಟುವಟಿಕೆ ನಡೆಸುತ್ತಾರೋ, ಯಾರು ಹಿಂದೂ ಹತ್ಯೆ ಮಾಡುತ್ತಾರೋ, ಬೆಂಗಳೂರಿನ ರುದ್ರೇಶ್ ಅವರಂತ ನಿರಪರಾಧಿಗಳನ್ನು ಹತ್ಯೆ ಮಾಡುತ್ತಾರೋ ಅದರ ಹಿಂದೆ ಪಿಎಫ್‍ಐ ಇತ್ತು. ಪ್ರವೀಣ್ ನೇಟ್ಟಾರು ಹತ್ಯೆಯೂ ಪಿ ಎಫ್‍ಐಯೇ ಮಾಡಿದ್ದು ಅನ್ನೋದು ಸ್ಪಷ್ಟಗೊಂಡಿದೆ. ರುದ್ರೇಶ್ ಹತ್ಯೆ ಕೇಸಿನಲ್ಲಿ ಪಿಎಫ್ ಐ ಸಂಘಟನೆಯ ಪ್ರಮುಖ ನಾಯಕರು ಜೈಲಿನಲ್ಲಿ ಇದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಮತ್ತು ಪಿ ಎಫ್ ಐ ಗೆ ಹಾಗೂ ಕಾಂಗ್ರೆಸ್ ಮತ್ತು ಎಸ್‍ಡಿಪಿಐಗೆ ಇರುವ ಸಂಬಂಧದ ಸತ್ಯಾಸತ್ಯತೆ ಅರ್ಥ ಆಗಬೇಕು ಎಂದು ಆಗ್ರಹಿಸಿದ ಅವರು, ಹೇಗೆ ನಿಮ್ಮ ನಾಯಕರು ವಿದೇಶಕ್ಕೆ ಹೋಗಿ ಭಾರತಕ್ಕೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡುತ್ತಾರೋ; ಭಾರತದ ವಿರುದ್ಧವೇ ಬೇರೆ ದೇಶದವರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೋ, ಹೇಗೆ ನೀವು ಪಾಕಿಸ್ತಾನ ಮತ್ತು ಚೀನಾ ಪರವಹಿಸಿ, ಭಾರತದ ವಿರುದ್ಧ ಪ್ರಧಾನಿಗಳ ವಿರುದ್ಧ ಮಾತನಾಡುತ್ತಿದ್ದೀರೋ, ಹೇಗೆ ನಿಮ್ಮ ನಾಯಕರು ನರೇಂದ್ರ ಮೋದಿ ಅವರನ್ನೇ ಮುಗಿಸಬೇಕೆಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೋ-ಇವೆಲ್ಲವುಗಳ ಉದ್ದೇಶ ಏನೆಂಬುದು ಜನರಿಗೆ ತಿಳಿಯಬೇಕು ಎಂದು ಆಗ್ರಹಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ರಾಜ್ಯ ಬಿಜೆಪಿ ಎಸ್. ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!