ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಸ್ಪಷ್ಟ ಬಹುಮತ ಪಡೆಯಲು ಕಾಂಗ್ರೆಸ್ ನ ಬೆಂಬಲ ಕೋರಿದೆ.
ಚುನಾವಣೆಯಲ್ಲಿ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದಿದೆ. ಇದರಿಂದ ಸರ್ಕಾರ ರಚಿಸಲು 118 ಶಾಸಕರು ಬೇಕಿದೆ. ಉಳಿದ 10 ಸ್ಥಾನಗಳಿಗೆ ಮತ್ತೊಂದು ಪಕ್ಷದ ಬೆಂಬಲ ಅಗತ್ಯವಿದ್ದು, ಹಾಗಾಗಿ ಕಾಂಗ್ರೆಸ್ ಬೆಂಬಲವನ್ನು ಕೋರಿದ್ದಾರೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಹೊಸ ಸರ್ಕಾರ ರಚಿಸಲು ಬೆಂಬಲ ಕೋರಿದ್ದಾರೆ. ಹೀಗಾಗಿ ನಾಳೆ ತಮಿಳುನಾಡು ಕಾಂಗ್ರೆಸ್ ಘಟಕವು ಚೆನ್ನೈನಲ್ಲಿ ಸಭೆ ನಡೆಸಲಿದ್ದು, ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಟಿವಿಕೆಗೆ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಈ ಸಂಬಂಧ ಅಂತಿಮ ಸುತ್ತಿನ ಸಭೆ ನಾಳೆ ನಡೆಯಲಿದೆ.
ಎಲ್ಲವು ಸುಸೂತ್ರವಾಗಿ ನಡೆದರೆ, ಪ್ರಮಾಣವಚನ ಸಮಾರಂಭವು ಮೇ 7ರಂದು ನಡೆಯಲಿದೆ ಎಂದು ವರದಿಯಾಗಿದೆ. ಹಿರಿಯ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತ್ತು ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಭಾಗವಹಿಸುವ ಸಾಧ್ಯತೆಯಿದೆ.



