ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಹೆಚ್ಚಾಗುತ್ತಿದ್ದು, ಅಧಿಕಾರಕ್ಕಾಗಿ ಒಳ ಜಗಳ ನಡೆಸುತ್ತಿದ್ದಾರೆ. ಇದನ್ನು ಮರೆ ಮಾಚಲು ಹುಲಿ ಉಗುರಿನ ಪೆಂಡೆಂಟ್ ಹಾಗೂ ಅಪರೇಶನ್ ಕಮಲದ ವಿಚಾರ ತಂದು ಡೈವರ್ಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಗೊಂದಲದಿಂದ ರಾಜ್ಯದ ಜನ ಅತಂತ್ರರಾಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೆರಡು ಡಿಸಿಎಂ ಹುದ್ದೆ ಸೃಷ್ಟಿ ಮಾಡಲು ಹೊರಟ್ಟಿದ್ದಾರೆ ಎಂದು ಹರಿಹಾಯ್ದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಬಿಟ್ಟು ಸಭೆ ಮಾಡುವ ಪರಿಸ್ಥಿತಿ ಬಂದಿದೆ. ಇದು ರಾಜಕೀಯ ಹೈಡ್ರಾಮ ಆಗಿದೆ ಎಂದರು.
ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಜಗಳ ತಾರಕಕ್ಕೇರಿದೆ. ಇದನ್ನು ಡೈವರ್ಟ್ ಮಾಡಲು ಅಪರೇಶನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದು, ಐದು ವರ್ಷ ನಡೆಸಲಿ. ಆದರೆ ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಾಲಿಶ ಹೇಳಿಕೆ ನೀಡೋದು ಬಿಡಬೇಕು ಎಂದರು.
ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಸ್ವಾಭಿಮಾನ ಅಂತ ಮಾತನಾಡುತ್ತಾರೆ. ಆದರೆ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ. ಜಲ ಸಂಪನ್ಮೂಲ ವಿಚಾರದಲ್ಲಿ ಸಹ ಸಿದ್ದರಾಮಯ್ಯ ಸಹಕಾರ ನೀಡಿಲ್ಲ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಅವಧಿಯಲ್ಲಿ ಪಿಎಸ್ ಐ ಹಗರಣ ಹೊರಬಂತು. ಐಜಿ ಅವರನ್ನೆ ಜೈಲಿಗೆ ಕಳುಹಿಸಿದೆವು. ಪರೀಕ್ಷೆ ಅಕ್ರಮ ತಡೆಗಟ್ಟಲು ಸಾಕಷ್ಟು ತಂತ್ರಜ್ಞಾನ ಇದ್ದರೂ ಅಕ್ರಮ ನಡೆದಿರುವುದು ಅನುಮಾನ ಮೂಡಿಸುತ್ತಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆಯಲ್ಲಿ ಯಾಕೆ ಸ್ಕ್ಯಾಮ್ ಆಗುತ್ತಿದೆ ಗೊತ್ತಾಗುತ್ತಿಲ್ಲ ಎಂದರು.