May 4, 2026
Monday, May 4, 2026
spot_img

ಕೇರಳದಲ್ಲಿ ಕಾಂಗ್ರೆಸ್ ಅಲೆ: ಪಿಣರಾಯಿ ವಿಜಯನ್‌ಗೆ ಧರ್ಮಡಂನಲ್ಲಿ ಭಾರೀ ಹಿನ್ನಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಆಡಳಿತಾರೂಢ ಎಲ್‌ಡಿಎಫ್ ಮೈತ್ರಿಕೂಟಕ್ಕೆ ಆರಂಭಿಕ ಹಂತದಲ್ಲೇ ದೊಡ್ಡ ಆಘಾತ ಎದುರಾಗಿದೆ. ಅತಿ ದೊಡ್ಡ ಬೆಳವಣಿಗೆಯೊಂದರಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭದ್ರಕೋಟೆ ಎನಿಸಿಕೊಂಡಿರುವ ಧರ್ಮಡಂ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಸುಮಾರು 2,000 ಮತಗಳ ಹಿನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ರಾಜ್ಯಾದ್ಯಂತ ಅಭೂತಪೂರ್ವ ಮುನ್ನಡೆ ಕಾಯ್ದುಕೊಂಡಿದ್ದು, ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಯುಡಿಎಫ್ 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ ಎಲ್‌ಡಿಎಫ್ ಕೇವಲ 40-50 ಕ್ಷೇತ್ರಗಳ ಆಸುಪಾಸಿನಲ್ಲಿ ಉಳಿದಿದೆ.

ಪಿಣರಾಯಿ ವಿಜಯನ್ ಅವರ ಸಂಪುಟದ ಸುಮಾರು 12 ಸಚಿವರು ಕೂಡ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಎಡರಂಗಕ್ಕೆ ಆತಂಕ ತಂದಿದೆ. ಭ್ರಷ್ಟಾಚಾರದ ಆರೋಪಗಳು ಮತ್ತು ಆಡಳಿತ ವಿರೋಧಿ ಅಲೆಯು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ವರವಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕೇರಳದಲ್ಲಿ ಅಧಿಕಾರ ಬದಲಾವಣೆಯ ಮುನ್ಸೂಚನೆ ದಟ್ಟವಾಗಿದ್ದು, ಅಂತಿಮ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !