ಹೊಸದಿಗಂತ ವರದಿ ಹುಬ್ಬಳ್ಳಿ:
ಚುನಾವಣೆಯಲ್ಲಿ ಬಿಜೆಪಿ ಅವರು ಹಣ ಹೊಳೆ ಹರಿಸಿದರೂ ಸಹ ಜನರು ಹಣ ಪಡೆದು, ಕಾಂಗ್ರೆಸ್ ಗೆ ಮತ ಹಾಕಲಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಮರಸ್ಯವಿಲ್ಲ. ಆದರೆ ಕಾಂಗ್ರೆಸ್ ನಲ್ಲಿ ಸಾಮರಸ್ಯದಿಂದ ಇದ್ದೇವೆ. ಮೂರು ಉಪ ಚುನಾವಣೆಯಲ್ಲಿ ನಮ್ಮ ಗೆಲವು ಖಚಿತ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ವಕ್ಫ್ ಬೋಡ್೯ ವಿಚಾರದಲ್ಲಿ ಕಾಂಗ್ರೆಸ್ ತಪ್ಪು ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ನೋಟಿಸ್ ಈಗಲೂ ಮುಂದುವರದಿದೆ. ಕಾಂಗ್ರೆಸ್ ರೈತರ ವಿರೋಧಿ ಅಲ್ಲ. ಅದು ಆಗಿದ್ದರೆ ದೇವರಾಜ ಅರಸು ಸರ್ಕಾರದ ಅವಧಿಯಲ್ಲಿ ೨೨ ಲಕ್ಷ ಹೆಕ್ಟೇರ್ ಜಮೀನು ರೈತರಿಗೆ ನೀಡುತ್ತಿರಲಿಲ್ಲ ಎಂದರು.
ಬಿಜೆಪಿ ವಿರೋಧ ಪಕ್ಷ ಸ್ಥಾನದಲ್ಲಿದ್ದು, ಹೋರಾಟ ಮಾಡುವುದು ಸಾಮಾನ್ಯ. ಚುನಾವಣೆ ಇರುವುದರಿಂದ ಮಾಡುತ್ತಿದ್ದಾರೆ. ಮೂರು ಉಪಚುನಾವಣೆ ಮುಗಿದ ಬಳಿಕ ಎಲ್ಲವನ್ನೂ ಬಿಟ್ಟು ಮನೆಗೆ ಹೋಗುತ್ತಾರೆ ಎಂದು ಕುಟುಕಿದರು.