ಭಯೋತ್ಪಾದಕರನ್ನು ಬೆಂಬಲಿಸುವ ಕಾಂಗ್ರೆಸ್ಸಿಗರು ದೇಶದ್ರೋಹಿಗಳು: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಮಂಡ್ಯ :

ಭಯೋತ್ಪಾದಕರನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ನಾಯಕರು ದೇಶದ್ರೋಹ ಪ್ರಕರಣದಲ್ಲಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ದೇಶದ ಸುರಕ್ಷತೆ ಬಗ್ಗೆ ಹಗುರವಾಗಿ ಮಾತನಾಡಿದರೆ ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ತಾಲೂಕು ಡಾ.ಇಂದ್ರೇಶ್ ನೇತೃತ್ವದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಗೋ ಮಾತೆ, ಭತ್ತ ಮತ್ತು ರಾಗಿ ಕಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೆಷರ್ ಕುಕ್ಕರಿನಲ್ಲಿ ಅಕ್ಕಿ ಬೇಯಿಸುವುದನ್ನು ನೋಡಿದ್ದೇನೆ ಹೊರತು ಬಾಂಬ್ ಬೇಯಿಸುವುದನ್ನು ಎಂದೂ ನೋಡಿಲ್ಲ. ಕುಕ್ಕರ್‌ನಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಿದವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಸುವ ಮೂಲಕ ಟೆರರಿಸ್ಟ್‌ಗಳ ಮೇಲೆ ಅನುಕಂಪ ತೋರಿಸುತ್ತಾರೆ. ಸಿದ್ದರಾಮಯ್ಯ ಅವರಿಗೆ ಧರ್ಮಾಂದ ಟಿಪ್ಪುವಿನ ಕನವರಿಕೆಯಾಗಿದೆ. ಕಾಂಗ್ರೆಸ್‌ನ ವರಿಷ್ಠ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷ ದೇಶದ ಪರವಾಗಿದ್ದಿಯೋ ಅಥವಾ ಭಯೋತ್ಪಾದಕರ ಪರವಾಗಿದ್ದಿಯೋ ಎಂದು ಸಪಷ್ಟಪಡಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ನಾಯಕರು ಮತ್ತೇ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ. ಕರ್ನಾಟಕದ ಜನ ಜಾಗೃತರಾಗಿದ್ದಾರೆ. ದಕ್ಷಿಣ ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ಬಿಜೆಪಿ ಪರವಾದ ಗಾಳಿ ಬಿರುಗಾಳಿಯಾಗಿ ಬೀಸುತ್ತಿದೆ. ದೇಶ ಮತ್ತು ರಾಜ್ಯದಲ್ಲಿ ಸಕಾರಾತ್ಮಕ ಅಡಳಿತ ನಡೆಯುತ್ತಿದೆ. ಸಿದ್ದರಾಮಯ್ಯ ಅವರಿಗೆ ನಿದ್ದೆಯಲ್ಲೂ ಮೋದಿ ಕಾಡುತ್ತಿದ್ದಾರೆ. ಅದಕ್ಕಾಗಿ ಬೆಳಗ್ಗೆ ಎದ್ದರೆ ಮೋದಿ ಜಪ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರಿಗೆ ಏನೂ ಮಾಡಿಲ್ಲ. 70 ವರ್ಷದ ಆಡಳಿತ ನಡೆಸಿದ್ದ ಕಾಂಗ್ರೆಸ್ಸಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ ಕೇವಲ 2 ವರ್ಷದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 30 ಲಕ್ಷ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಿದೆ. ಡಬಲ್ ಇಂಜಿನ್ ಸರ್ಕಾರ ಏನೂ ಮಾಡಿದೆ ಎನ್ನುವವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಸೇರಿದಂತೆ ಕೇಂದ್ರ ಸರ್ಕಾರ 6 ಸಾವಿರ ಕಿ.ಮೀ ಹೆದ್ದಾರಿ ಹಾಗೂ ರಾಜ್ಯ ಸರ್ಕಾರ 3 ಸಾವಿರ ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಿಸಿರುವ ಬಗ್ಗೆ ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.
ದುಡಿಯುವ ವರ್ಗಕ್ಕೆ ಶಕ್ತಿ ತುಂಬಬೇಕು ಎಂಬ ಕಾರಣಕ್ಕೆ ರೈತರು ಮತ್ತು ನೇಕಾರರ ಬಡ ಮಕ್ಕಳಿಗಾಗಿ ವಿದ್ಯೆ ನಿಧಿ ಸ್ಥಾಪಿಸಲಾಗಿದೆ. ನೇಕರರ ಸಮ್ಮಾನ್ ಯೋಜನೆಯಡಿ 45 ಸಾವಿರ ನೇಕಾರರ ಖಾತೆಗೆ 5 ಸಾವಿರ ಹಣ ಹಾಕಲಾಗಿದೆ. ಸ್ವಾಮಿವಿವೇಕಾನಂದ ಅವರ ಹೆಸರಿನಲ್ಲಿ ಪ್ರತಿ ತಾಲೂಕಿನಲ್ಲಿ 2 ಯುವಕರ ಸಂಘಗಳಿಗೆ 5 ಲಕ್ಷ ಹಾಗೂ ಎರಡು ಮಹಿಳಾ ಸಂಘಗಳಿಗೆ 5 ಲಕ್ಷ ಹಣ ನೀಡಿ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ರೈತರ ಬಗ್ಗೆ ಮಾತನಾಡೋಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್‌ನವರಿಗೆ ಯಾವುದೇ ಹಕ್ಕಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನ್ನ ಭಾಗ್ಯದ ಅಕ್ಕಿಗೂ ಕನ್ನ ಹಾಕಿತ್ತು. ಸಣ್ಣ ನೀರಾವರಿ, ದೊಡ್ಡ ನೀರಾವರಿ, ಹಾಸ್ಟೆಲ್ ವಿದ್ಯಾರ್ಥಿಗಳ ಹಾಸಿಗೆ, ದಿಬ್ಬಿನಲ್ಲೂ ಭ್ರಷ್ಟಚಾರ ನಡೆಸಿದೆ. ನಾನು ನೀರಾವರಿ ಮಂತ್ರಿಯಾಗಿದ್ದಾಗ ತುಕ್ಕು ಹಿಡಿದಿದ್ದ ಕೆಆರ್‌ಎಸ್ ಡ್ಯಾಂನ ಗೇಟ್‌ಗಳನ್ನು ದುರಸ್ತಿ ಮಾಡಿಸಲು 80 ಕೋಟಿ ಅನುದಾನ ನೀಡಿದ್ದೆನೆ. ವಿಶ್ವೇಶ್ವರಯ್ಯ ನಾಲಾ ಆಧುನೀಕರಣಕ್ಕೆ 325 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನೀರಾವರಿ ಕ್ಷೇತ್ರಕ್ಕೆ 606 ಕೋಟಿ ಮಂಜೂರಾತಿ ಕೊಡುತ್ತೇವೆ. ಜತೆಗೆ ಕೆರೆಗಳನ್ನು ತುಂಬಿಸಲು 454 ಕೋಟಿ ಕೊಡುತ್ತೇವೆ. ಕಾವೇರಿ ನೀರಿನಲ್ಲಿ ರೈತ ಬೆವರು ಬೆರೆತರೆ ಬಂಗಾರ ಬೆಳೆಯಬಹುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!